

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಇತಿಹಾಸ ಸಂಶೋಧನ ಮಂಡಲವು ಶತಮಾನಕ್ಕೂ ಹೆಚ್ಚು ವರ್ಷಗಳಿಂದ ತನ್ನದೇ ಆದ ವಿಶಿಷ್ಟ ವಿಷಯಗಳಲ್ಲಿ ಅನೇಕ ಮಹತ್ವಪೂರ್ಣ ಕಾರ್ಯಕಲಾಪ ನಡೆಸುತ್ತಿದೆ. ಇದೀಗ ಪ್ರಸ್ತುತ ಮೋಡಿ ಲಿಪಿ ಪ್ರಶಿಕ್ಷಣಕ್ಕಾಗಿ 3 ತಿಂಗಳ ಕೋರ್ಸ್ ಆಂಭಿಸಲಾಗಿದೆ ಎಂದು ಮೋಡಿ ಲಿಪಿ ತಜ್ಞ ಡಾ. ಎಂ.ವೈ. ಸಾವಂತ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೋಡಿ ಲಿಪಿಯಲ್ಲಿರುವ ಉತ್ತರ ಕರ್ನಾಟಕದ ಚಾರಿತ್ರಿಕ ದಾಖಲೆಗಳು ಮತ್ತು ಭೂ ದಾಖಲೆಗಳನ್ನು ಓದಿ ಅನುವಾದಿಸಿಕೊಡುವ ಬಗ್ಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಬಳ್ಳಾರಿ, ಗದಗ, ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿದೆ. ಹೀಗಾಗಿ ಭೂ ದಾಖಲೆಗಳನ್ನು ಸಿದ್ಧಪಡಿಸಿ ಮೋಡಿ ಲಿಪಿಯಲ್ಲಿ ನಿರ್ವಹಿಸುತ್ತಿರುವುದು ಮತ್ತು ಸುಲಭವಾಗಿ ಕಲಿಯಲು ಮೋಡಿ ಲಿಪಿ ಬಗ್ಗೆ ತಿಳಿಸಲಾಗಿವುದು ಎಂದರು.
ನ. 19ರಿಂದ ಮೊದಲ ಕೋರ್ಸ್ ಆರಂಭವಾಗಲಿದ್ದು, ವಾರದಲ್ಲಿ ಒಂದು ದಿನ ತರಗತಿ ನಡೆಸಲಾಗುವುದು. ಈ ವೇಳೆ ಪ್ರಶಿಕ್ಷಣಾರ್ಥಿಳಿಗೆ ಸೂಕ್ತ ಮಾಹಿತಿ ಹಾಗೂ ಒಂದು ವಾರದವರೆಗೆ ಮಾಡಬಹುದಾದ ಮನೆ ಕೆಲಸ ನೀಡಲಾಗುವುದು. ಸರ್ಕಾರಿ ನೌಕರರು, ವಕೀಲರು ಹಾಗೂ ಆಸಕ್ತರು ಇದರ ಸದುಪಯೋಗ ಪಡೆಯಬೇಕು ಎಂದರು.
ಡಾ. ಗಿರಿಧರ ಕಿನ್ನಹಾಳ, ಡಾ. ಮಧುಮತಿ ಇತರರು ಇದ್ದರು.