ಮೋಜು, ಮಸ್ತಿ ಸ್ಥಳವಾಗುತ್ತಿರುವ ಜಾತ್ರೋತ್ಸವ

9ss2
Published on

ಶನಿವಾರಸಂತೆ: ಗ್ರಾಮೀಣ ಸೊಗಡಿನ ಜಾತ್ರೋತ್ಸವಗಳು ಪ್ರಸ್ತುತ ದಿನಗಳಲ್ಲಿ ಮೋಜು, ಮಸ್ತಿ ಮಾಡುವ ಸ್ಥಳವಾಗುತ್ತಿವೆ ಎಂದು ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.


ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಜಯದೇವ ಜಾತ್ರಾ ಕಲಾ ವೇದಿಕೆಯಲ್ಲಿ 79ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಜಾತ್ರೋತ್ಸವಗಳಂತಹ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಭಾಗದ ರೈತಾಪಿ ಜನರು ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ವರ್ಷಕೊಮ್ಮೆ ಜಾತ್ರೆಗಳನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಇಂಥ ಜಾತ್ರೆಗಳು ಜನರು, ರೈತರು ಸೇರುವ ಸಾಂಸ್ಕೃತಿಕ ವೇದಿಕೆ. ಆದರೆ ಇಂದು ಈ ವ್ಯವಸ್ಥೆ ನಶಿಸುತ್ತಿದೆ. ಜಾತ್ರೋತ್ಸವಗಳನ್ನು ಉಳಿಸಲು ಇಂದಿನ ಪೀಳಿಗೆ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.


ಕೊಡ್ಲಿಪೇಟೆ ಕಲ್ಲುಮಠದ ಶ್ರೀಮಹಾಂತ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ವೈಜ್ಞಾನಿಕವಾಗಿ ಅಭಿವೃದ್ಧಿಯತ್ತ ಸಾಧಿಸುತ್ತಿದ್ದರೂ ಆಂತರಿಕವಾಗಿ ಕುಬ್ಜರಾಗುತ್ತಿದ್ದೇವೆ. ಸೊನ್ನೆಯಿಂದ ಮನುಷ್ಯನ ಬದುಕು ಪ್ರಾರಂಭವಾಗಿ ಸೊನ್ನೆಯಲ್ಲೇ ಅಂತ್ಯಗೊಳ್ಳುತ್ತಿರುವ ಮಧ್ಯದಲ್ಲಿರುವ ಒಳಿತು ಮಾಡುವ ಮೂಲಕ ಸತ್ತ ಮೇಲೆಯೂ ಹೆಸರು ಉಳಿಯುವಂತಾಗಬೇಕು ಎಂದು ಸಲಹೆ ನೀಡಿದರು.


ಮಾಜಿ ತಾ.ಪಂ. ಸದಸ್ಯ ಬಿ.ಎಸ್.ಅನಂತ್‌ಕುಮಾರ್ ಮಾತನಾಡಿ, ಎಲ್ಲ ಜಾತಿ-ಧರ್ಮ, ಬಡವ-ಶ್ರೀಮಂತ ಎಂಬ ಭೇದ ಭಾವ ಇಲ್ಲದೆ ಐಕ್ಯತೆಯನ್ನು ಸಾರುವ ನಿಟ್ಟಿನಲ್ಲಿ ಜಾತ್ರೆಗಳನ್ನು ಉಳಿಸಿಕೊಳ್ಳಲು ಜಾತ್ರಾ ಸಮಿತಿಯವರು ಪ್ರಯತ್ನಿಸುವಂತೆ ಸಲಹೆ ನೀಡಿದರು.

ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಸಿಐ ನಾಗೇಶ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್, ಪ್ರಮುಖರಾದ ಹಾಲಪ್ಪ, ಎಸ್.ಎಂ.ಉಮಾಂಶಕರ್, ಹಂಡ್ಲಿ ಪಿಡಿಒ ಸ್ಮಿತಾ ಮಾತನಾಡಿದರು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಫರ್ಜಾನ್ ಶಾಹಿದ್ ಖಾನ್, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಮಹಾದೇವಮ್ಮ, ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿನಿತ್, ಕಾರ್ಯದರ್ಶಿ ಅಶೋಕ್, ಪ್ರಮುಖರಾದ ಸಂದೀಪ್, ಗ್ರಾ.ಪಂ ಸದಸ್ಯರು, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. 15 ದಿನಗಳ ವರೆಗೆ ನಡೆದ ಜಾತ್ರೆಗೆ ಗುರುವಾರ ತೆರೆ ಬಿದ್ದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net