

ವಿಜಯವಾಣಿ ವಿಶೇಷ ಹುಬ್ಬಳ್ಳಿ
ಕರೊನಾದಿಂದ ಕುಸಿದಿರುವ ಆರ್ಥಿಕತೆ ಚುರುಕುಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ.ಗಳ ಆತ್ಮ ನಿರ್ಭರ ಪ್ಯಾಕೇಜ್ ಘೊಷಿಸಿದ್ದೇ ತಡ, ಅದೇ ಹೆಸರಿನಲ್ಲಿ ಮುಗ್ಧರನ್ನು ವಂಚಿಸುವವರು ಅಲ್ಲಲ್ಲಿ ತಲೆ ಎತ್ತಿದ್ದಾರೆ. ಇಂಥವುಗಳ ಖಚಿತತೆಗೆ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ರಿಯಾಲಿಟಿ ಚೆಕ್ ಮಾಡಿದಾಗ, ವ್ಯಕ್ತಿಯೊಬ್ಬ ಇಲ್ಲಿಯ ವಿಕಾಸ ನಗರದಲ್ಲಿ ಕಚೇರಿ ತೆಗೆದು, ಆಸಕ್ತರಿಂದ ಹಣ ಪಡೆಯುತ್ತಿರುವುದು ಕಂಡುಬಂದಿದೆ.
ನಾರ್ಥ್ ಕರ್ನಾಟಕ ಇಂಡಸ್ಟ್ರೀಸ್ ಆಂಡ್ ಕಾಯಕ ಎಸ್ಎಚ್ಜಿ ಡೆವಲಪ್ವೆುಂಟ್ ಆಂಡ್ ಮಾರ್ಕೆಟಿಂಗ್ ಕಾಪೋರೇಷನ್ (ಎನ್ಕೆಐಕೆಎಸ್ಎಚ್ಜಿಡಿಎಂಸಿ) ಎಂಬ ಹೆಸರಿನ ಸಂಸ್ಥೆಯ ಎಂ.ಡಿ. ಎಂದು ಗುರುತಿಸಿಕೊಳ್ಳುವ ವ್ಯಕ್ತಿ, ಬ್ಯಾಂಕ್ನಿಂದ ಸಾಲ ಕೊಡಿಸುವುದಾಗಿ ಹೇಳುತ್ತಾರೆ. ಅನೇಕರು ಈಗಾಗಲೇ ಈತನನ್ನು ನಂಬಿ ಹಣ ಕೊಡುತ್ತಿದ್ದಾರೆ.
ಕೇಂದ್ರ ಸರ್ಕಾರ ಆತ್ಮ ನಿರ್ಭರ ಪ್ಯಾಕೇಜ್ ಅಡಿ ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ರೂ. ನೀಡಲಿದೆ. ಸಣ್ಣ ಉದ್ಯಮ ಮಾಡುವವರಿಗೆ ಪ್ರೋತ್ಸಾಹ, ಬೆಂಬಲ ನೀಡುವುದೇ ತನ್ನ ಉದ್ದೇಶ. ಕರ್ಪರ, ಪೇಪರ್ ಪ್ಲೇಟ್, ಮೇಣದಬತ್ತಿ, ಆಫೀಸ್ ಫೈಲ್ಸ್… ಮೊದಲಾದವುಗಳನ್ನು ಉತ್ಪಾದಿಸಲು ಸಾಲ ಕೊಡಿಸಿ, ಯಂತ್ರ ತಂದು ನಿಮ್ಮ ಮನೆಯಲ್ಲಿ ಅಳವಡಿಸಿ, ತರಬೇತಿ ನೀಡಿ, ಕಚ್ಚಾ ವಸ್ತು ಪೂರೈಸಿ, ಉತ್ಪಾದಿತ ವಸ್ತುವನ್ನು ತಾವೇ ತೆಗೆದುಕೊಳ್ಳುತ್ತೇವೆ. ತಿಂಗಳಿಗೆ 50-60 ಸಾವಿರ ರೂ. ದುಡಿಯಬಹುದು ಎಂದು ಹೇಳುತ್ತಾರೆ ಸಂಸ್ಥೆ ಎಂಡಿ ಎ. ಮಲ್ಲಿಕಾರ್ಜುನ.
ಇಷ್ಟೇ ಸಾಕಂತೆ: ಫೋಟೋ, ಪಾನ್ ಕಾರ್ಡ್, ಆಧಾರ ಕಾರ್ಡ್, ವಾಸಸ್ಥಳದ ದಾಖಲೆ, 30 ಸಾವಿರ ರೂ. ಮುಂಗಡ ಕೊಡಿ. ಉದ್ಯಮದ ಹೆಸರು, ಜಿಎಸ್ಟಿ ಸಂಖ್ಯೆ ರಿಜಿಸ್ಟರ್ ಮಾಡಿಸಿ, ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿ, ಬ್ಯಾಂಕ್ ಸಾಲ ಕೊಡಿಸುತ್ತೇನೆ. 10 ಲಕ್ಷ ಸಾಲಕ್ಕೆ 2.5 ಲಕ್ಷ ರೂ.ಗಳನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ತೋರಿಸಬೇಕಾಗುತ್ತದೆ. ಯಾವುದೇ ಗ್ಯಾರಂಟಿ/ಜಾಮೀನು ಇಲ್ಲದೆ ಸಾಲ ಮಂಜೂರಿ ಮಾಡಿಸಿಕೊಡುತ್ತೇನೆ ಎಂದು ನಂಬುವಂತೆ ವಿವರಿಸುತ್ತಾರೆ. ಕಂಜೂಸಿ ಮಾಡಿದರೆ 20 ಸಾವಿರಕ್ಕೇ ಡೀಲ್ ಕುದುರುತ್ತದೆ. ಅನೇಕರು ಈಗಾಗಲೇ ಹಣ ಕೊಟ್ಟಿದ್ದಾರೆ. ಅದರ ಕತೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ಸ್ವಂತ ಜಿಲ್ಲೆಯಲ್ಲಿ ಮೋದಿ ಪ್ಯಾಕೇಜ್ ಹೆಸರಿನಲ್ಲಿ ಆಮಿಷ ಒಡ್ಡಿ ವಂಚನೆ ಮಾಡುತ್ತಿರುವ ಅನೇಕರಿದ್ದಾರೆ. ಮುಗ್ಧರು ಮೋಸ ಹೋಗದಂತೆ ತಪ್ಪಿಸಲು ಸರ್ಕಾರ ಮುಂದಾಗಬೇಕಿದೆ.
ಭೇಟಿಗೆ 100 ರೂ. ಈ ಕಚೇರಿಗೆ ಹೋದವರ ಪ್ರವರ ಕೇಳುವ ಸ್ವಾಗತಕಾರರು, 100 ರೂ. ತುಂಬಿ ಒಂದು ಫಾಮರ್್ನಲ್ಲಿ ವಿವರ ಬರೆದುಕೊಟ್ಟರೆ, ಎಂ.ಡಿ. ಸಾಹೇಬರ ಭೇಟಿ ಮಾಡಿಸುವುದಾಗಿ ಹೇಳುತ್ತಾರೆ. ಚೇಂಬರ್ ಹೊಕ್ಕರೆ, ಎಂ.ಡಿ. ಮಲ್ಲಿಕಾರ್ಜುನ ‘ಖಂಡಿತ ಸಾಲ ಕೊಡಿಸುವ’ ಭರವಸೆ ನೀಡುತ್ತಾರೆ.
ಗೆದ್ದವರ ಉದಾಹರಣೆ ಇಲ್ಲ ನಿಮ್ಮ ಸಹಕಾರದಿಂದ ಉದ್ಯಮ ಸ್ಥಾಪಿಸಿ ಯಶಸ್ವಿಯಾದವರ ಉದಾಹರಣೆ ಕೊಡಿ ಎಂದರೆ ಎಂ.ಡಿ. ಸಾಹೇಬರು ಸ್ವಲ್ಪ ತಡಬಡಾಯಿಸುತ್ತಾರೆ. ಬೆಳಗಾವಿ, ಬಾಗಲಕೋಟೆ ಕಡೆ ಇದ್ದಾರೆ. ಇಲ್ಲಿ ಸದ್ಯ ಯಾರೂ ಇಲ್ಲ. ಹೊಸದಾಗಿ ಕಚೇರಿ ತೆರೆದಿದ್ದೇವೆ ಎನ್ನುತ್ತಾರೆ!
ಸರ್ಕಾರದ ಅಧೀನದಲ್ಲಿದೆಯಂತೆ! ್ಞಞಠಞಛಿ.ಜ್ಞಿ ಎಂಬುದು ಸಂಸ್ಥೆಯ ವೆಬ್ಸೈಟ್. ಇದರಲ್ಲಿ, ಸಂಸ್ಥೆಯು ಭಾರತ ಸರ್ಕಾರದ ಎಂಎಸ್ಎಂಇ ಇಲಾಖೆ, ಕರ್ನಾಟಕ ಸರ್ಕಾರದ ಕಾಯಕ ಯೋಜನೆಯಡಿ ನೋಂದಾಯಿತ ‘ಲೀಡಿಂಗ್ ಆರ್ಗನೈಜೇಷನ್’ ಆಗಿದೆ ಎಂದು ಘೊಷಿಸಿಕೊಳ್ಳಲಾಗಿದೆ. ತಮಾಷೆಯ ವಿಷಯ ಎಂದರೆ, ಸಂಸ್ಥೆಯ ಫಲಕದ ಮೇಲ್ಭಾಗದಲ್ಲಿ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಯಲಾಗಿದ್ದು, ಮುಗ್ಧ ಜನರು ಇದೊಂದು ಸರ್ಕಾರಿ ಕಚೇರಿಯೇ ಆಗಿರಬೇಕು ಎಂದು ಭಾವಿಸುವಂತಿದೆ.
ನೋಂದಣಿ ಬೇಕಿಲ್ಲ ನಿಮ್ಮಲ್ಲಿ ಫಾಮ್ರ್ ತುಂಬಿ ಹಣ ಕೊಟ್ಟರೆ ಎಂಎಂಸ್ಎಂಇ/ಡಿಐಸಿ/ಕೆವಿಐಸಿ ಹೀಗೆ ಯಾವುದರಲ್ಲಾದರೂ ನಮ್ಮ ಉದ್ಯಮದ ನೋಂದಣಿ ಮಾಡಿಸುತ್ತೀರಾ ಎಂದು ಕೇಳಿದರೆ, ಅಂಥದ್ದೇನೂ ಬೇಕಾಗಿಲ್ಲ. ಉತ್ಪಾದನೆಯನ್ನು ನಾವೇ ಖರೀದಿಸುತ್ತೇವೆ ಎಂಬ ಭರವಸೆಯ ನಮ್ಮ ಪತ್ರ ನೋಡಿಯೇ ಬ್ಯಾಂಕಿನವರು ಸಾಲ ಕೊಡುತ್ತಾರೆ ಎಂದು ನಂಬಿಸಲಾಗುತ್ತಿದೆ.
ಕಚೇರಿ ವೈಭವ ಈ ಕಚೇರಿ ಗೋಡೆ ತುಂಬ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಣಕಾಸು ಸಚಿವರು, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ ಪ್ರಮುಖ ರಾಜಕಾರಣಿಗಳ ದೊಡ್ಡ ದೊಡ್ಡ ಪೋಸ್ಟರ್ ಅಂಟಿಸಲಾಗಿದೆ. ಅಲ್ಲಿಗೆ ಹೋಗುವವರು ಇದೊಂದು ಭಾರಿ ಸಂಸ್ಥೆ ಎಂದು ನಂಬಲೇಬೇಕು! ನಿಮ್ಮ ಸಂಸ್ಥೆ ನೋಂದಣಿ ದಾಖಲೆ ಕೊಡಿ ಎಂದರೆ, ಎನ್ಕೆಐಕೆಎಸ್ಎಚ್ಜಿಡಿಎಂಸಿ ಹೆಸರಲ್ಲಿ ಪಾನ್ಕಾರ್ಡ್ ಹಾಗೂ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ದಾಖಲೆಯನ್ನಷ್ಟೇ ನೀಡಿದರು ಮಲ್ಲಿಕಾರ್ಜುನ. ಎಂಎಸ್ಎಂಇಯಲ್ಲಿ ಸಂಸ್ಥೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದರು. ತನ್ನ ಸಂಸ್ಥೆ ನೋಂದಣಿಯಾಗುವ ಮೊದಲೇ ಕಚೇರಿ ತೆಗೆದು ಬೋರ್ಡ್ ಹಾಕಿಕೊಂಡು, ಸಾಲ ಕೊಡಿಸುವ ಭರವಸೆ ನೀಡುವವರನ್ನು ನಂಬುವ ಮೊದಲು ನವ ಉದ್ಯಮಿಗಳು ಯೋಚಿಸುವುದು ಒಳಿತು.
ಕೇಂದ್ರ ಸರ್ಕಾರದ ಎಂಎಸ್ಎಂಇ, ಉದ್ಯಮಶೀಲರಿಗೆ ಮುಕ್ತವಾಗಿರುವ ಜವಬ್ದಾರಿಯುತ ಸಂಸ್ಥೆ. ಯಾರು ಬೇಕಾದರೂ ಕಚೇರಿ ವೇಳೆಯಲ್ಲಿ ಬಂದು ಉಚಿತವಾಗಿ ಸರಿಯಾದ ಮಾಹಿತಿ ಪಡೆಯಬಹುದು. ಅಧಿಕೃತ ವೆಬ್ಸೈಟ್ನಿಂದಲೂ ಪಡೆಯಬಹುದಾಗಿದೆ. 20-30 ಸಾವಿರ ರೂ. ಮುಂಗಡ ಪಡೆದು ಸಾಲ ಕೊಡಿಸುತ್ತೇನೆ ಎಂದು ಕೆಲ ಖಾಸಗಿ ವ್ಯಕ್ತಿ/ಸಂಸ್ಥೆಯವರು ಹೇಳುವುದು ಒಂದು ವಂಚನೆ ತಂತ್ರ. ಯಾರೂ ಅಂಥವರನ್ನು ನಂಬಿ ಬಲೆಗೆ ಬೀಳಬಾರದು. - ಮಿಲಿಂದ ಬಾರಾಪತ್ರೆ, ನಿರ್ದೇಶಕರು, ಎಂಎಸ್ಎಂಇ ಅಭಿವೃದ್ಧಿ ಸಂಸ್ಥೆ, ಹುಬ್ಬಳ್ಳಿ
* ಸರ್ಕಾರದ ಯೋಜನೆಗಳ ಕುರಿತು ಕೈಗಾರಿಕಾ ಇಲಾಖೆ ಉಚಿತವಾಗಿ ಮಾಹಿತಿ, ಬೆಂಬಲ ಕೊಡುತ್ತದೆ. ಎಂಎಸ್ಎಂಇ ನೋಂದಣಿಯನ್ನು ಉಚಿತವಾಗಿ ವೆಬ್ಸೈಟ್ ಮೂಲಕವೇ ಮಾಡಿಕೊಳ್ಳಬಹುದು. ಸರಿಯಾದ ತಿಳಿವಳಿಕೆ ಪಡೆದುಕೊಳ್ಳದೆ ಖಾಸಗಿ ವ್ಯಕ್ತಿಗಳನ್ನು ನಂಬಿ ಉದ್ಯಮಾಸಕ್ತರು ಮೋಸ ಹೋಗಬಾರದು. ಈ ಹಿಂದೆ ಅನೇಕರು ನಾನಾ ರೀತಿಯಲ್ಲಿ ವಂಚಿಸಿ ಪರಾರಿಯಾದ ಉದಾಹರಣೆಗಳಿವೆ. ಅಂಥವುಗಳಿಂದ ಯುವಜನರು ಪಾಠ ಕಲಿತು, ಜಾಗೃತರಾಗಬೇಕು. - ಮೋಹನ ಭರಮಕ್ಕನವರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ
ಉದ್ಯಮ ಸ್ಥಾಪನೆಗೆ ಅಗತ್ಯ ದಾಖಲೆ ಸಿದ್ಧಪಡಿಸಿಕೊಟ್ಟು, ನೆರವು ಕೊಡಿಸಲು ಆಸಕ್ತರಿಂದ 10 ಸಾವಿರ ರೂ. ಪಡೆಯುತ್ತೇವೆ. ಅವರಿಗೆ ಬಾಂಡ್ ಮಾಡಿಕೊಟ್ಟಿರುತ್ತೇವೆ. ಸಾಲ ತೀರಿದ ಮೇಲೆ ಆ ಹಣವನ್ನೂ ವಾಪಸ್ ಕೊಡುತ್ತೇವೆ. ವಿಶ್ವಾಸ ಇಟ್ಟವರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಸದ್ಯದಲ್ಲೇ ಅಧಿಕೃತ ನೋಂದಣಿ ಪ್ರದರ್ಶಿಸಲಿದ್ದೇವೆ. ಎ. ಮಲ್ಲಿಕಾರ್ಜುನ, ಎಂ.ಡಿ., ಎನ್ಕೆಐಕೆಎಸ್ಎಚ್ಜಿಡಿಎಂಸಿ