

ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಪತ್ರಿಕೋದ್ಯಮದ ದಿಗ್ಗಜ ಮೊಹರೆ ಹಣಮಂತರಾಯರ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಯುವ ಭಾರತ ಸಮಿತಿ ಜಿಲ್ಲಾ ಘಟಕ ಹಾಗೂ ಮೊಹರೆ ಹಣಮಂತರಾಯ ಅಭಿಮಾನಿಗಳ ಬಳಗದ ಸದಸ್ಯರು ಮಂಗಳವಾರ ವಿವಿ ಕುಲಪತಿ ಡಾ.ಓಂಕಾರ ಕಾಕಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಹೋರಾಟಗಾರ ವಿನೋದಕುಮಾರ ಮಣ್ಣೂರ ಮಾತನಾಡಿ, ಹಿರಿಯ ಸ್ವಾತಂತ್ರೃ ಹೋರಾಟಗಾರ, ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾದ ಕನ್ನಡ ಪತ್ರಿಕೋದ್ಯಮದ ದಿಗ್ಗಜ ಮೊಹರೆ ಹಣಮಂತರಾಯರ ಅಧ್ಯಯನ ಪೀಠವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಬೇಕೆಂಬುದು ಈ ಭಾಗದ ಜನತೆಯ ದಶಕಗಳ ಕನಸು. ಮೊಹರೆ ಹಣಮಂತರಾಯರು ಕನ್ನಡ ನಾಡಿನ ಧೀಮಂತ ವ್ಯಕ್ತಿ. ಕನ್ನಡ ನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದು ಪತ್ರಿಕಾ ಸ್ವಾತಂತ್ರೃ ಹಾಗೂ ವಾಕ್‌ಸ್ವಾತಂತ್ರೃದ ಬಗ್ಗೆ ಜನಜಾಗೃತಿ ಮೂಡಿಸಿದವರು ಎಂದು ಸ್ಮರಿಸಿದರು.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದ ಮೊಹರೆ ಹಣಮಂತರಾಯರು ಮಹಾತ್ಮ ಗಾಂಧೀಜಿ ಅವರ ಕರೆಗೆ ಮೇರೆಗೆ ವಕೀಲಿ ವೃತ್ತಿ ತೊರೆದು, ಸ್ವಾತಂತ್ರೃ ಸಂಗ್ರಾಮಕ್ಕೆ ಧುಮುಕಿದವರು. ಕನ್ನಡಿಗರನ್ನು ಹೋರಾಟಕ್ಕೆ ಸಜ್ಜುಗೊಳಿಸಿದ ಕ್ರಾಂತಿಪುರುಷ. ಲೇಖನಿಯನ್ನು ಶಸವನ್ನಾಗಿ ಬಳಸಿದವರು. ಹಸಿಗೋಡೆ ಮೇಲೆ ಹರಳು ಎಸೆದಂತೆ ಪ್ರಖರ ಲೇಖನಗಳ ಮೂಲಕ ಮನೆಮಾತಾದವರು.
ಬ್ರಿಟಿಷ್ ಸರ್ಕಾರ ಹಲವಾರು ಬಾರಿ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿದರೂ ಅವರು ಮಣಿಯಲಿಲ್ಲ. ಒಮ್ಮೆ ಮೊಹರೆ ಅವರನ್ನು ಬಂಧಿಸಿದ ಬ್ರಿಟಿಷ್ ಅಧಿಕಾರಿಗಳು ಅವರ ಕೈಗೆ ಕೋಳ ತೊಡಿಸಿ ಮೆರವಣಿಗೆ ಮಾಡುತ್ತಾ ಜೈಲಿಗೆ ಕರೆದೊಯ್ದ ನೆನಪಿಗಾಗಿ ವಿಜಯಪುರದ ರಸ್ತೆಯೊಂದಕ್ಕೆ ಮೊಹರೆ ಹಣಮಂತರಾಯ ಹೆಸರು ನಾಮಕರಣ ಮಾಡಿದ್ದು ಇತಿಹಾಸ. ಈ ಹಿನ್ನೆಲೆಯಲ್ಲಿ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮೊಹರೆ ಹಣಮಂತರಾಯ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಸತೀಶ ಬಾಗಿ, ವಿರೇಶ ಗೊಬ್ಬೂರ, ಗಿರೀಶ ಕುಲಕರ್ಣಿ, ಸಂತೋಷ ಝಳಕಿ, ಮಹೇಶ ನೀವರಗಿ, ಸೋಮಶೇಖರ ಬಿರಾದಾರ, ಅನೀಲ ಧನಶ್ರೀ ಮೊದಲಾದವರು ಪಾಲ್ಗೊಂಡಿದ್ದರು.