

ಹುಬ್ಬಳ್ಳಿ: ವಿಶ್ವ ಮಾಲಿನ್ಯ ನಿಯಂತ್ರಣ ದಿನದ ನಿಮಿತ್ತ ನಗರದ ವಸುಂಧರಾ ಫೌಂಡೇಷನ್ ಹಾಗೂ ಸ್ವರ್ಣಾ ಸಮೂಹ ಸಂಸ್ಥೆ, ಮಹಾನಗರ ಪಾಲಿಕೆ, ಧಾರವಾಡದ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಸಹಯೋಗದಲ್ಲಿ ‘ಮೊಳೆ ಮುಕ್ತ ಮರ’ ಅಭಿಯಾನವನ್ನು ಶುಕ್ರವಾರ ನಡೆಸಲಾಯಿತು.
ನಗರದ ಮಯೂರಿ ಎಸ್ಟೇಟ್ ಬಡಾವಣೆಯಲ್ಲಿ ಅನಧಿಕೃತವಾಗಿ ಗಿಡ- ಮರಗಳಿಗೆ ಹೊಡೆಯಲಾದ ಮೊಳೆ ಸಹಿತ ಜಾಹೀತಾತು ಫಲಕಗಳನ್ನು ತೆಗೆಯುವ ಅಭಿಯಾನಕ್ಕೆ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಚಾಲನೆ ನೀಡಿದರು.
ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ - ಧಾರವಾಡದಲ್ಲಿ ಪ್ರತಿಯೊಬ್ಬ ನಾಗರೀಕರು ತಮ್ಮ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಪಾಲಿಸಬೇಕು. ವಸುಂಧರಾ ಫೌಂಡೇಷನ್ ನಡೆಸುತ್ತಿರುವ ಮೊಳೆ ಮುಕ್ತ ಮರ ಅಭಿಯಾನ ಉತ್ತಮ ಕಾರ್ಯ ಎಂದು ಆಯುಕ್ತರು ಶ್ಲಾಘಿಸಿದರು.
ಸ್ವರ್ಣಾ ಸಮೂಹದ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಗಿಡ- ಮರಗಳಿಗೂ ಜೀವ ಇರುತ್ತದೆ. ನಗರ ಪ್ರದೇಶದಲ್ಲಿನ ಗಿಡ -ಮರಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ. ಮರಗಳು ಪರಿಸರದ ಅವಿಭಾಜ್ಯ ಅಂಗವಾಗಿದ್ದು, ಉಸಿರಾಡಲು ಶುದ್ಧ ಗಾಳಿ, ನೆರಳು ಜೀವವೈವಿದ್ಯಕ್ಕೆ ಆಸರೆಯಾಗಿದೆ ಎಂದರು.
ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ ಮಾತನಾಡಿ, ಮರಗಳ ಮೇಲೆ ಜಾಹೀರಾತುಗಳನ್ನು ಅಂಟಿಸುವುದು ಕಾನೂನು ಬಾಹಿರವಾಗಿದೆ. ಮರಗಳಿಗೆ ಕಬ್ಬಿಣದ ಮೊಳೆಗಳನ್ನು ಹೊಡೆಯುವುಯುದರಿಂದ ಅದರ ಜೀವಿತಾವಧಿ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಯು ಇಂತಹ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಭಿಯಾನದಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ, ಉಪಮೇಯರ್ ಉಮಾ ಮುಕುಂದ, ಗ್ರೀನ್ ಕರ್ನಾಟಕ ಅಸೋಷಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ, ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಲಕ್ಷ್ಮೀ ಬಾಳಿಕಾಯಿ, ವಿನಾಯಕ ನಾಯ್ಕರ, ಮಹಾಂತೇಶ, ಮುಖೇಶ, ಪ್ರಶಾಂತ ತಳವಾರ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.