

ಹುಬ್ಬಳ್ಳಿ: ಮುಂಗಾರು ಮಾರುತಗಳು ಮೂರ್ನಾಲ್ಕು ದಿನ ತಡವಾಗಿ ರಾಜ್ಯ ಪ್ರವೇಶಿಸಿವೆ. ಅಲ್ಲದೆ, ನಿರೀಕ್ಷೆಯಂತೆ ಮಳೆಯನ್ನೂ ಸುರಿಸಿಲ್ಲ. ಹೀಗಾಗಿ, ರೈತರಲ್ಲಿ ಆತಂಕ ಸೃಷ್ಟಿಯಾಗಿದೆೆ.
ಜೂನ್ ತಿಂಗಳ ಮೊದಲ ವಾರದ ನಂತರ ಹೊಲಗಳಲ್ಲಿ ಬಿತ್ತನೆಯಾದ ಬೀಜಗಳು ಮೊಳಕೆಯೊಡೆದು ಅಲ್ಲಲ್ಲಿ ಹಸಿರು ಕಾಣಿಸುತ್ತಿತ್ತು. ಧಾರವಾಡ ಜಿಲ್ಲೆಯಲ್ಲಿ ಜೂನ್ 10ರವರೆಗೆ ಸುಮಾರು 82 ಸಾವಿರ ಹೆಕ್ಟೇರ್ನಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ. ಆದರೆ, ಮಳೆಯ ದರ್ಶನ ಇಲ್ಲದ್ದರಿಂದ ಹೊಲದಲ್ಲಿ ಹಸಿರು ಕಾಣುತ್ತಿಲ್ಲ.
ಈಗ ಮೃಗಶಿರಾ ಮಳೆ ಕಾಲ. ಈ ಅವಧಿಯಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು, ಬಿಟ್ಟು ಬಿಡದೇ ಮಳೆ ಸುರಿಯಬೇಕು. ಈ ಹಿಂದಿನ ರೋಹಿಣಿ ಮಳೆಯೂ ಅಷ್ಟಾಗಿ ಸುರಿಯದೆ ಕೈಕೊಟ್ಟಿದೆ. ಈ ಎರಡೂ ಮಳೆಗಳು ದುರ್ಬಲವಾದರೆ ಮುಂಗಾರಿನ ಮೇಲೆ ದುಷ್ಪರಿಣಾಮ ಬೀರಲಿದೆ. ನಾವೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ಕೃಷಿಕರು.
ಮುಂಗಾರು ಪೂರ್ವ ಮಳೆಯಲ್ಲೇ ಹೊಲ ಹಸನು ಮಾಡಿ ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ದೊಡ್ಡ ಆತಂಕ ಶುರುವಾಗಿದೆ. ಪ್ರತಿ ವರ್ಷ ಜೂನ್ 1ರಿಂದ 10ರ ವರೆಗಿನ ವಾಡಿಕೆ ಮಳೆ ಧಾರವಾಡ ಜಿಲ್ಲೆಯಲ್ಲಿ 40.6 ಮಿ.ಮೀ. ಆಗುತ್ತಿತ್ತು. ಒಟ್ಟಾರೆ ಧಾರವಾಡ ಜಿಲ್ಲೆ ತೆಗೆದುಕೊಂಡರೆ 41.7 ಮಿ.ಮೀ. ಎಂಎಂ ಆಗಿದೆ. ಆದರೆ, ಧಾರವಾಡ, ಅಳ್ನಾವರ, ಅಣ್ಣಿಗೇರಿ, ನವಲಗುಂದ ತಾಲೂಕು ಬಿಟ್ಟರೆ ಉಳಿದ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 41 ಮಿ.ಮೀ. ಆಗಬೇಕಿತ್ತು. ಆಗಿದ್ದು 32 ಮಿ.ಮೀ. ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಇದು ಇನ್ನೂ ಕಡಿಮೆಯಾಗಿದೆ. ಕೇವಲ 12 ಮಿ.ಮೀ. ಆಗಿದ್ದು, ಶೇ. 65ರಷ್ಟು ಮಳೆ ಕೊರತೆಯಾಗಿದೆ. ಕಲಘಟಗಿಯಲ್ಲಿ ಶೇ. 32ರಷ್ಟು ಕೊರತೆ, ಕುಂದಗೋಳದಲ್ಲಿ ಶೇ. 34ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಬೋರ್ವೆಲ್ ಮೂಲಕ ನೀರು:
ಮಳೆ ಬರಬಹುದು ಎಂದುಕೊಂಡು ಕೆಲವರು ಒಣ ಜಮೀನಿನಲ್ಲೇ ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವೆಡೆ ಉತ್ತಮ ಹದ ಇದ್ದುದರಿಂದ ಬಿತ್ತನೆ ಮಾಡಿದ್ದಾರೆ. ಆದರೆ, ಬಹಳಷ್ಟು ಕಡೆ ಹದ ಸಿಗದೇ ಬಿತ್ತನೆಯಾಗಿಲ್ಲ. ಕೆಲ ರೈತರು ಧೈರ್ಯ ಮಾಡಿ ಅದರಲ್ಲೇ ಬಿತ್ತನೆ ಮಾಡಿದ್ದಾರೆ. ಅಂತಹ ಕಡೆಗಳಲ್ಲಿ ಸರಿಯಾಗಿ ಮೊಳಕೆ ಬರುತ್ತಿಲ್ಲ.
ಹೀಗೆ ಬಿತ್ತನೆ ಮಾಡಿದ ಬೆಳೆಗಳಿಗೆ ಆರ್ದ್ರತೆ ಸಿಗದೆ ಮೊಳಕೆ ಒಡೆದಿಲ್ಲ. ಬೋರ್ವೆಲ್ ಹೊಂದಿರುವ ರೈತರು ಅದರ ಮೂಲಕ ನೀರು ಉಣಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬಹಳಷ್ಟು ರೈತರು ಯಾವುದೇ ನೀರಿನ ಮೂಲ ಇಲ್ಲದೆ ಮಳೆಗಾಗಿ ಮುಗಿಲು ನೋಡುವ ಪರಿಸ್ಥಿತಿ ಬಂದಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಈಗಾಗಲೇ ಬಿತ್ತನೆಯಾಗಿರುವ ಸೋಯಾಬೀನ್, ಹೆಸರು, ಗೋವಿನ ಜೋಳ, ಉದ್ದು, ಶೇಂಗಾ ಮುಂತಾದ ಬೆಳೆಗಳು ಕೈಕೊಡುವ ಭೀತಿ ಎದುರಾಗಿದೆ. ಸಾವಿರಾರು ರೂ. ಖರ್ಚು ಮಾಡಿ ತಂದ ಬೀಜ, ಗೊಬ್ಬರ ನಷ್ಟವಾಗಲಿದೆ.
ಸೋಯಾಬೀನ್ ಈವರೆಗೆ 25 ಸಾವಿರ ಹೆಕ್ಟೇರ್, ಹೆಸರು 12 ಸಾವಿರ ಹೆಕ್ಟೇರ್, ಗೋವಿನಜೋಳ 18 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಮಳೆಯಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲು ರೈತರು ಸಜ್ಜಾಗಿದ್ದಾರೆ.
ಅಧಿಕ ಉಷ್ಣಾಂಶ
ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಬಿತ್ತನೆಯಾದ ನಂತರ ಮಳೆ ಆರಂಭವಾಗಿ ಸಾಮಾನ್ಯ ಉಷ್ಠಾಂಶ 26 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬೇಕು. ಆದರೆ, ಧಾರವಾಡದಲ್ಲಿ ಇದೀಗ ಸಾಮಾನ್ಯ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದೆ.
ಮುಂದ ಮಳಿ ಆದೀತು ಅಂತ ಅರಹಸಿಯೊಳಗ ಬಿತ್ತಿ ಬಂದೇವಿ. ಅದರ ಮ್ಯಾಲ್ ಒಂದಿಟ ಮಳೆರಾಯ ಕೃಪೆ ತೋರಿದರ ಬಿತ್ತಿದ ಬೀಜ ಹುಟ್ಟಿಕೊಂಡು ಹಸಿರು ಕಾಣ್ತಿತ್ತು. ಒಂದು ವಾರ ಆದರೂ ಮಳಿ ಸುಳಿವ ಇಲ್ಲ, ಹಿಂಗಾದ್ರ ನಮ್ಮ ಪಾಡು ಕಷ್ಟ ಅಕ್ಕೇತಿ...| ವಿರೂಪಾಕ್ಷಪ್ಪ ಸೋಗಿ, ಹುಬ್ಬಳ್ಳಿ ರೈತ
ಬೀಜ ಬಿತ್ತನೆಯಾಗಿ ಎಂಟು ದಿನ ಕಳೆಯುವದರೊಳಗೆ ಮೊಳಕೆಯೊಡೆದು ಹಸಿರು ಕಾಣಬೇಕು. ಸದ್ಯ ಇಂತಹ ಸ್ಥಿತಿ ತಾಲೂಕಿನಲ್ಲಿ ಇಲ್ಲ. ಮಳೆ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣ. ರೈತರು ಒಣ ಬಿತ್ತನೆ ಮಾಡಿದ್ದರೆ ಒಂದಿಷ್ಟು ತಡವಾಗಿ ಮಳೆಯಾದರೂ ಬೀಜ ಹುಟ್ಟಿಕೊಳ್ಳುತ್ತದೆ.| ರಾಜಶೇಖರ ಅಣಗೌಡರ, ಸಹಾಯಕ ಕೃಷಿ ನಿರ್ದೇಶಕರು, ಹುಬ್ಬಳ್ಳಿ