

ನವಲಗುಂದ: ತಾಲೂಕಿನ ಮೊರಬ ಗ್ರಾಮಕ್ಕೆ ವಕ್ಕರಿಸಿರುವ ಕರೊನಾ ಸೋಂಕು ಭಾನುವಾರ ಪಕ್ಕದ ಶಿರಕೋಳ ಗ್ರಾಮಕ್ಕೂ ಎಂಟ್ರಿ ಕೊಟ್ಟಿದೆ. ಇದರಿಂದ ಗ್ರಾಮಸ್ಥರಲ್ಲಿ ಕರೊನಾ ಸೋಂಕಿನ ಬಗ್ಗೆ ಭಯ-ಭೀತಿ ಆವರಿಸಿದೆ.
ಮೊರಬ ಗ್ರಾಮದ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಶಿರಕೋಳ ಗ್ರಾಮದ 36 ವರ್ಷದ ಪುರುಷನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈತನನ್ನು ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲದೆ, ಈತ ಅವಿಭಕ್ತ ಕುಟುಂಬಕ್ಕೆ ಸೇರಿದವನಾಗಿದ್ದರಿಂದ ಮನೆಯ 120 ಜನರನ್ನು ತಾಲೂಕಾಡಳಿತ ಅಧಿಕಾರಿಗಳು ಗೃಹಬಂಧನದಲ್ಲಿ ಇರಿಸಿದ್ದಾರೆ. ಈತನ ಮನೆಯಿಂದ 100 ಮೀ. ಪ್ರದೇಶವನ್ನು ಗ್ರಾಪಂ, ತಾಪಂ, ಪೊಲೀಸರು ಸೀಲ್ಡೌನ್ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹನಸಿ, ಮೊರಬ, ತಿರ್ಲಾಪುರ, ಬಳ್ಳೂರ ಗ್ರಾಮಗಳ ರಸ್ತೆಗಳನ್ನು ಬ್ಯಾರಿಕೇಡ್ ಇರಿಸಿ ಬಂದ್ ಮಾಡಿದ್ದಾರೆ.
ತಹಸೀಲ್ದಾರ ನವೀನ ಹುಲ್ಲೂರ, ಸಿಪಿಐ ಚಂದ್ರಶೇಖರ ಮಠಪತಿ, ತಾ. ಪಂ. ಇಓ ಪವಿತ್ರಾ ಪಾಟೀಲ, ಹಾಗೂ ಪಂಚಾಯತಿ ಸಿಬ್ಬಂದಿ ಗ್ರಾಮದಲ್ಲಿ ಕರೊನಾ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಫಾಗಿಂಗ್, ರಾಸಾಯನಿಕ ಸಿಂಪಡೆಣೆ ಹಾಗೂ ಶುಚಿತ್ವ ಕಾರ್ಯ ಕ್ರಮ ಕೈಗೊಂಡಿದ್ದಾರೆ.