

ಮೈಸೂರು: ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಿಂದ ಕನ್ನಡ ಪುಸ್ತಕೋದ್ಯಮ ಉಳಿಯಲಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಭಿಪ್ರಾಯಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಪ್ರಾಧಿಕಾರದ ಅಧ್ಯಕ್ಷನಾದ ಮೇಲೆ ಅಂಗಳದಲ್ಲಿ ತಿಂಗಳಿಗೊಂದು ಪುಸ್ತಕ, ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೊದಲು ನಮ್ಮ ಹಸ್ತಗಳು ಖಾಲಿ ಇದ್ದವು.
ಆದರೆ, ಪುಸ್ತಕಗಳು ಸಿಗುತ್ತಿರಲಿಲ್ಲ. ಈಗ ಕೈಗೆ ಮೊಬೈಲ್ ಬಂದಿರುವುದರಿಂದಾಗಿ ನೂರಾರು ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಅವು ಕೈಗೆ ಬರುತ್ತಿಲ್ಲ. ಈ ಹಿಂದೆ ಅಡುಗೆ ಮನೆಯಲ್ಲಿದ್ದಾಗಲೂ ಮಹಿಳೆಯರು ಪುಸ್ತಕ ಓದುತ್ತಿದ್ದರು. ಈಗ ಮೊಬೈಲ್‌ನಿಂದಾಗಿ ಪರಿಸ್ಥಿತಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರಣದಿಂದಾಗಿ ಪ್ರಾಧಿಕಾರ ವತಿಯಿಂದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದಾಗಿ ಪುಸ್ತಕೋದ್ಯಮವೂ ಉಳಿಯಲಿದೆ. ಪ್ರತಿಯೊಬ್ಬರಿಗೂ ಪುಸ್ತಕ ಖರೀದಿ ಅಭ್ಯಾಸ ಮಾಡಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರು ಕೆಲಸ ಮಾಡಲಿದ್ದಾರೆ. ಇವರಿಗೆ ಕಂದಾಯ ವಿಭಾಗ ಮಟ್ಟದಲ್ಲಿ ಒಂದು ಪ್ರಶಸ್ತಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಇಲ್ಲಿ ಉಚಿತವಾಗಿ ಪುಸ್ತಕ ನೀಡುತ್ತಿರುವುದು ಔಚಿತ್ಯಪೂರ್ಣವಾಗಿದೆ. ಇವು ಉಚಿತ ಎಂದರೆ ಔಚಿತ್ಯಪೂರ್ಣವಾದವು ಎಂದು ಭಾವಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಪುಸ್ತಕ ದೈತ್ಯರಾಗಿದ್ದರು. ತಲೆ ಬಗ್ಗಿಸಿ ಪುಸ್ತಕ ಓದು, ಅದು ನೀನು ತಲೆಯೆತ್ತಿ ಓಡಾಡುವಂತೆ ಮಾಡುತ್ತದೆ ಎಂದಿರುವ ಮಾತು ಉಲ್ಲೇಖಾರ್ಹ ಎಂದರು.
ಆಧುನಿಕ ಕಾಲದಲ್ಲಿ ಪುಸ್ತಕ ಸಂಸ್ಕೃತಿ ಕಳೆಗುಂದಿದೆ. ಇದಕ್ಕಾಗಿ ನಾವು ವಿಷಾದಿಸುವಂತಾಗಿದೆ. ಪುಸ್ತಕ ಸಂಸ್ಕೃತಿಯ ಮಾಧುರ್ಯ ಸಪ್ಪೆಯಾಗುತ್ತಿದೆ. ಅದರ ಬೆಳಕು ಮಬ್ಬಾಗುತ್ತಿದೆ. ಈ ಬದಲಾವಣೆಗೆ ಸಾಮಾಜಿಕ ಜಾಲತಾಣಗಳ ಹಾವಳಿ, ಚರ ದೂರವಾಣಿಯ ಅನಿಷ್ಟ ಕಾರಣವಾಗಿದೆ. ಪುಸ್ತಕ ಸಂಸ್ಕೃತಿ ಭುವನದ ಭಾಗ್ಯ ಮಾತ್ರವಲ್ಲ, ಭವನದ ಭಾಗ್ಯವೂ ಆಗಬೇಕು ಎಂದರು.
ಪ್ರಾಧಿಕಾರದ ಆಡಳಿತಾಧಿಕಾರಿ ಎನ್.ಕರಿಯಪ್ಪ ಅರ್ಹತಾ ಪತ್ರ ವಿತರಿಸಿದರು. ಮೈಸೂರು ಜಿಲ್ಲೆಯ ಮನೆಗೊಂದು ಗ್ರಂಥಾಲಯ ಸಮಿತಿ ಸಂಚಾಲಕ ಎಂ.ಚಂದ್ರಶೇಖರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಇನ್ನಿತರರಿದ್ದರು.