ಮೊಬೈಲ್‌ನಿಂದ ಓದುವ ಹವ್ಯಾಸ ಮಾಯ

15KMD-1 (2)
ಚಿಕ್ಕರಸಿನಕೆರೆ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಮಳವಳ್ಳಿ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರದಲ್ಲಿ ಜಿಲ್ಲಾಧಿಕಾರಿ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಯಮದೂರು ಸಿದ್ದರಾಜು, ಡಾ. ಅಪ್ಪಗೆರೆ ತಿಮ್ಮರಾಜು, ಪ್ರೊ.ಪುಷ್ಪಾ ಇತರರು ಇದ್ದರು.
Published on

ಕೆ.ಎಂ.ದೊಡ್ಡಿ: ಆಧುನಿಕ ಯುಗದಲ್ಲಿ ಎಲ್ಲವೂ ಮೊಬೈಲ್ ಮಾಯೆಯಾಗಿದ್ದು, ಓದುವ ಹವ್ಯಾಸ, ಮಾನವೀಯ ಮೌಲ್ಯಗಳನ್ನು ಮರೆತು ಬಿಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಆತಂಕ ವ್ಯಕ್ತಪಡಿಸಿದರು.

ಸಮೀಪದ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಮಳವಳ್ಳಿ ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಕಾಲೇಜಿನ ದಿನಗಳಲ್ಲೇ ದುಶ್ಚಟಗಳಿಗೆ ದಾಸರಾಗಿ ಓದುವ ಕಡೆ ಗಮನ ಕೊಡುವುದನ್ನೇ ಮರೆತು ಬಿಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ, ಗುಬ್ಬಚ್ಚಿಗಳನ್ನು ತೋರಿಸಿ ಊಟ ತಿನ್ನಿಸುತ್ತಿದ್ದರು. ಆದರೀಗ ಮಕ್ಕಳಿಗೆ ಮೊಬೈಲ್, ಟಿವಿ ತೋರಿಸಿ ಊಟ ತಿನ್ನಿಸುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳ ಮಿದುಳಿನ ಮೇಲೆ ದುಷ್ಪ್ಪರಿಣಾಮ ಬೀರಲಿದ್ದು, ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಮಕ್ಕಳನ್ನು ಮೊಬೈಲ್‌ಗಳಿಂದ ದೂರ ಇಡಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ದಿನ ಪತ್ರಿಕೆಗಳು, ಕಥೆ, ಕಾದಂಬರಿಗಳನ್ನು ಓದುವ ಅಭ್ಯಾಸ ರೂಢಿಸಿದರೆ ಅವರ ಜ್ಞಾನ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲೇ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಪೋಷಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಮಂಡ ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಬೆಳೆಯುವ ಸಿರಿ ಮೊಳೆಕೆಯಲ್ಲಿ ಅನ್ನವಂತೆ ಚಿಕ್ಕಂದಿನಿಂದಲೇ ತಿದ್ದಿ ಬೆಳೆಸಿದರೆ, ಮುಂದೆ ತಂದೆ-ತಾಯಿ ಹೆಸರನ್ನು ಉಳಿಸುತ್ತಾರೆ ಎಂದರು.

ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಯಮದೂರು ಸಿದ್ದರಾಜು ಮಾತನಾಡಿ, ಶಿಕ್ಷಕರು ಮಕ್ಕಳ ಪ್ರತಿ ಹೆಜ್ಜೆಗಳನ್ನು ಗಮನಿಸುತ್ತಿರಬೇಕು. ಗುರುವಿನ ಪಾತ್ರ ಬಹಳ ಮುಖ್ಯವಾಗಿದ್ದು, ಇವರನ್ನು ಗೌರವದಿಂದ ಕಾಣಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ರಚಿಸಿರುವ ಶಿಕ್ಷಣ ಸೌಂದರ್ಯ ಪುಸ್ತಕವನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಮತ್ತು ಅಪಾರ ಜಿಲ್ಲಾಧಿಕಾರಿ ಡಾ.ನಾಗರಾಜು ಬಿಡುಗಡೆಗೊಳಿಸಿದರು.

ಮೈಸೂರು ವಿಶ್ವವಿದ್ಯಾಲಯ ಶಿಕ್ಷಣ ಶಾಸ್ತ್ರ ಅಧ್ಯಯಾನ ವಿಭಾಗದ ಅಧ್ಯಕ್ಷೆ ಪ್ರೊ.ಪುಷ್ಪಾ, ಶಂಭುಲಿಂಗೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಂಚಲಿಂಗೇಗೌಡ, ಪ್ರಾಂಶುಪಾಲ ಡಾ.ಬಾಲಸುಬ್ರಹ್ಮಣ್ಯ, ಚಿಕ್ಕರಸಿನಕೆರೆ ಶಿವಲಿಂಗಯ್ಯ, ಪರಿಸರ ಪ್ರೇಮಿ ಸಾಲುಮರದ ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net