

ಮೈಸೂರು: ಹದಿಹರೆಯದ ವಯಸ್ಸಿನಲ್ಲಿ ಹಲವು ಅಪಾಯಗಳು ಎದುರಾಗುತ್ತವೆ. ಮೊಬೈಲ್, ಸಾಮಾಜಿಕ ಮಾಧ್ಯಮಗಳ ವ್ಯಸನ ಅತ್ಯಂತ ಅಪಾಯಕಾರಿ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಎಚ್.ಜಿ.ಮಂಜುನಾಥ್ ಎಚ್ಚರಿಸಿದರು.
ಮಾನವ ಅಭಿವೃದ್ಧಿ ಮತ್ತು ಕಲ್ಯಾಣ ಸಂಘ, ಭಾರತೀಯ ಗೃಹ ವಿಜ್ಞಾನ ಸಂಘದ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ‘ಹದಿಹರೆಯದಲ್ಲಿ ಅಪಾಯಗಳು ಮತ್ತು ಸ್ಥಿತಿ ಸ್ಥಾಪಕತ್ವದ ಕವಲುದಾರಿಯಲ್ಲಿ ಜೀವನ ಕೌಶಲಗಳು’ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳು, ಟಿವಿ ಮಾಧ್ಯಮ, ಸಮಾಜದಲ್ಲಿ ಕೆಲವು ದೈಹಿಕ ಹಾಗೂ ಮಾನಸಿಕವಾದ ಆಕರ್ಷಣೆಗಳು ಸೆಳೆಯುತ್ತಿರುತ್ತವೆ. ಅಂತಹವುಗಳನ್ನು ವಿವೇಕದಿಂದ ತಿರಸ್ಕರಿಸುವ, ಆಲೋಚಿಸುವ ಕೆಲಸ ಮಾಡಬೇಕು. ಹದಿಹರೆಯದವರಿಗೆ ನಿರ್ಣಾಯಕ ಆಲೋಚನೆ ಅಗತ್ಯವಾಗಿದೆ ಎಂದರು.
ಹದಿಹರೆಯದಲ್ಲಿ ಉತ್ತಮ ಅಭ್ಯಾಸ ಬೆಳೆಸಿಕೊಂಡರೆ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಹದಿಹರೆಯ ಎಂದರೆ ಬಾಲ್ಯದಿಂದ ಪ್ರೌಢಾವಸ್ಥೆಗೆ ಬದಲಾವಣೆಯಾಗುವ ಕಾಲಘಟ್ಟ. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಾಗುತ್ತಿರುತ್ತದೆ.
ಈ ಪ್ರಕ್ರಿಯೆಗೆ ಹಾರ್ಮೋನ್‌ಗಳು ಹೆಚ್ಚಾಗಿ ಉತ್ಪತ್ತಿಯಾಗುವ ಮೂಲಕ ಸಹಕಾರ ನೀಡುತ್ತವೆ. ಇಂತಹ ಸಂದರ್ಭದಲ್ಲಿ ಉದ್ವೇಗ, ಉದ್ರಿಕ್ತ, ಸಿಟ್ಟು, ಭಯ ಮುಂತಾದ ಪ್ರಕ್ರಿಯೆಗಳು ವ್ಯಕ್ತವಾಗುತ್ತವೆ. ಪಾಲಕರು ಇದನ್ನು ಗಮನಿಸುವ ಮೂಲಕ ಮಕ್ಕಳಿಗೆ ಧೈರ್ಯ ತುಂಬಬೇಕು. ಆಗ ಮಕ್ಕಳು ಸರಿದಾರಿಯತ್ತ ಸಾಗಲು ಅನುಕೂಲವಾಗುತ್ತದೆ ಎಂದರು.
ಹದಿಹರೆಯದಲ್ಲಿ ಬರುವ ಸಮಸ್ಯೆ ಪರಿಹಾರಕ್ಕೆ ಯೋಗ-ಧ್ಯಾನ, ಶಿಸ್ತು-ಸಂಯಮ ಮೈಗೂಡಿಸಿಕೊಳ್ಳಬೇಕು. ಉತ್ತಮ ಪುಸ್ತಕ ಓದಬೇಕು.
ಉತ್ತಮ ವ್ಯಕ್ತಿತ್ವವನ್ನು ಹೊಂದಿರುವವರನ್ನು ರೋಲ್ ಮಾಡೆಲ್ ಆಗಿಸಿಕೊಂಡು ಅವರ ಆದರ್ಶ ಪಾಲಿಸಬೇಕು. ಅವರ ಜೀವನ ಸಾಧನೆ ಅನುಸರಿಸಬೇಕು. ಆಗ ಮಾತ್ರ ಯುವ ಸಮೂಹ ಉತ್ತಮ ಅಂಶ ಬೆಳೆಸಿಕೊಳ್ಳಬಹುದು ಎಂದರು.
ಮೈವಿವಿ ಆಹಾರ ವಿಜ್ಞಾನ ಮತ್ತು ಪೋಷಣೆ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಕೋಮಲಾ, ಡಾ.ಎಚ್.ಆರ್.ದಿವ್ಯಶ್ರೀ, ಎಸ್.ಕೆ.ಪವನ್‌ಕುಮಾರ್ ಮತ್ತಿತರರು ಇದ್ದರು.