ಮೊಬೈಲ್ ಬಿಡಿ ವಚನ ಸಾಹಿತ್ಯ ಕೊಡಿ

Photo
Published on

ಬಸವಕಲ್ಯಾಣ: ಧನ್ನೂರ (ಆರ್) ಗ್ರಾಮದಲ್ಲಿ ಶ್ರೀ ಬಸವೇಶ್ವರ ಪುತ್ಥಳಿ ಶುಕ್ರವಾರ ಅನಾವರಣ ಮಾಡಲಾಯಿತು. ಊರ ಮಧ್ಯ ಭಾಗದಲ್ಲಿ ಸುಂದರವಾಗಿ ನಿರ್ಮಿಸಿದ ಪುತ್ಥಳಿಗೆ ಮುತ್ತೈದೆಯರಿಂದ ಕುಂಭ ಕಳಸದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪುತ್ಥಳಿ ಅನಾವರಣಗೊಳಿಸಿದ ಖೇರ್ಡಾ (ಬಿ) ಶಿವಲಿಂಗೇಶ್ವರ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳನ್ನು ಸಮಾಧಾನಪಡಿಸಲು ಪಾಲಕರು ಕೈಗೆ ಮೊಬೈಲ್ ಫೋನ್ ಕೊಡುತ್ತಿರುವುದು ಅಪಾಯಕರ ಸಂಗತಿ. ಇದರ ಬದಲು ಅವರಿಗೆ ಬಸವಾದಿ ಶರಣರ ಚಿಂತನೆಗಳನ್ನು ತಿಳಿಸಿಕೊಡುವುದರ ಜತೆಗೆ ವಚನ ಸಾಹಿತ್ಯ ಕೊಟ್ಟು ಓದಲು ಹೇಳಿ. ಇದರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಲಿದೆ ಎಂದರು.

ಬಸವ ಪುತ್ಥಳಿ ಅನಾವರಣ ಮಾಡಿದರೆ ಸಾಲದು. ಅವರ ತತ್ವಾದರ್ಶ ಪಾಲಿಸಿಕೊಂಡು ಜೀವನ ಸಾಗಿಸಬೇಕು. ಸಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಕಾಯಕ, ದಾಸೋಹ ತತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಡೊಂಗರಗಾಂವ ಆಶ್ರಮದ ಶ್ರೀ ಉದಯರಾಜ ಯೋಗೀಂದ್ರ ಶಿವಾಚಾರ್ಯ ಮಾತನಾಡಿ, ಮನುಷ್ಯರಿಗೆ ಅರಿವಿನ ಮಾರ್ಗ ಹೇಳಿಕೊಟ್ಟಿದ್ದು ಬಸವಣ್ಣ. ಯುವಕರು ಹಳ್ಳಿಯಲ್ಲಿ ಕುಳಿತು ದುಶ್ಚಟಗಳಿಗೆ ಬಲಿಯಾಗುವ ಬದಲು, ಸಮಾಜದ ಪರಿವರ್ತನೆಗೆ ಏನು ಮಾಡಬೇಕೆಂಬ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಶ್ರೀ ಚನ್ನವೀರ ಸ್ವಾಮೀಜಿ ಯರಬಾಗ, ಶ್ರೀ ಶಿವಪ್ರಸಾದ ದೇವರು ಯರನಾಳ ಮಾತನಾಡಿದರು. ಶಿವಲಿಂಗಯ್ಯ ಸ್ವಾಮಿ, ಕಲ್ಯಾಣರಾವ ಪಾಟೀಲ್, ಮಲ್ಲಯ್ಯ ಚಿಕ್ಕಮಠ, ಆಕಾಶ ಪಾಟೀಲ್, ರೇವಣಸಿದ್ದ, ವಿಕಾಸ ಇತರರಿದ್ದರು. ಶರಣಬಸಪ್ಪ ಸಾಹು ಸ್ವಾಗತಿಸಿ ನಿರೂಪಣೆ ಮಾಡಿದರು.

ಜನ್ಮ ದಿನ ಸ್ಮರಣೀಯ
ಯುವ ಮುಖಂಡ ಆಕಾಶ ಪಾಟೀಲ್ ಜನ್ಮದಿನ ಶುಕ್ರವಾರ. ಇದರ ಸವಿ ನೆನಪಿಗಾಗಿ ಊರಿನಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪಿಸಿದ್ದಾರೆ. ವೈಯಕ್ತಿಕವಾಗಿ ಎಲ್ಲ ಖರ್ಚು-ಭರಿಸಿ ಗ್ರಾಮಸ್ಥರೊಂದಿಗೆ ಪುತ್ಥಳಿ ಅನಾವರಣಗೊಳಿಸಿದ್ದು ವಿಶೇಷ. ಬಹಳ ಜನ ತಮ್ಮ ಜನ್ಮ ದಿನವನ್ನು ಸಾವಿರಾರು ರೂ. ವೆಚ್ಚ ಮಾಡಿ ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ದುಂದು ವೆಚ್ಚದ ಬದಲು ನೆನಪಿನಲ್ಲಿ ಇರುವಂಥ ಕಾರ್ಯ ಮಾಡುವ ನಿಟ್ಟಿನಲ್ಲಿ ಪುತ್ಥಳಿ ಸ್ಥಾಪಿಸಿರುವೆ ಎನ್ನುತ್ತಾರೆ ಆಕಾಶ ಪಾಟೀಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net