

ಹಾಸನ: ಪ್ರಸ್ತುತ ದಿನಗಳಲ್ಲಿ ಮಕ್ಕಳು ಮನೆಯಲ್ಲಿ ಮೊಬೈಲ್ ಮತ್ತು ಟ್ಯಾಬ್‌ನಲ್ಲೇ ಕಾಲ ಕಳೆಯುವುದರಿಂದ ಓದುವುದು ಮತ್ತು ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಬಿ.ಆರ್. ಪೂರ್ಣೀಮ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ದಸರಾ ಕ್ರೀಡೆಯಿಂದ ಜಿಲ್ಲಾ ಮಟ್ಟದ ಕ್ರೀಡೆಗೆ ಆಯ್ಕೆಯಾದವರು ಇಲ್ಲಿ ಗೆಲುವು ಪಡೆದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಜಿಲ್ಲಾ ಮಕ್ಕಳು ರಾಜ್ಯಮಟ್ಟದಲ್ಲೂ ಎಲ್ಲ ಕ್ರೀಡೆಗಳಲ್ಲೂ ವಿಜೇತರಾಗಬೇಕು ಎಂದು ಶುಭ ಆರೈಸಿದರು.
ದೇಶದಲ್ಲಿ ಇಂದು ಕ್ರೀಡೆಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡು ಬಂದಿದೆ. ಹಿಂದಿನ ದಿನಗಳಲ್ಲಿ ಈ ವಾತಾವರಣ ಇರಲಿಲ್ಲ. ಇಂದು ಕ್ರೀಡೆಗಾಗಿ ಸರ್ಕಾರ ಕೂಡ ಹೆಚ್ಚು ಅನುದಾನ ಕೊಡುತ್ತಿದೆ. ಪ್ರತಿ ವರ್ಷ ಕ್ರೀಡೆಗೆ ಸಂಬಂಧಿಸಿದ ಕಿಟ್ ಕೊಡಲಾಗುತ್ತಿದ್ದು, ಕೆಲ ದಿನಗಳ ಹಿಂದೆ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೆ ಹೆಚ್ಚಾಗಿ ಇರುವುದು ಕಂಡು ಬಂತು. ಇದು ಸಂತೋಷದ ಸಂಗತಿ ಎಂದರು.
ಮಕ್ಕಳನ್ನು ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಬೇಕು ಎಂಬ ಭಾವನೆ ಪೋಷಕರಲ್ಲೂ ಬಂದಿರುವುದು ಉತ್ತಮವಾಗಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೂ ಕೂಡ ಅನುಕೂಲವಾಗಲಿದೆ. ನಮ್ಮ ಮನೆಯ ಇಬ್ಬರೂ ಮಕ್ಕಳು ಕೂಡ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡೆ ಬಗ್ಗೆ ನಮ್ಮಲ್ಲಿಯೂ ಕೂಡ ಆಸಕ್ತಿ ಇದ್ದು, ಸೋಲು- ಗೆಲುವು ನಂತರದ ಪ್ರಶ್ನೆ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಇತ್ತೀಚಿನ ದಿನಗಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದು ನೋವಿನ ಸಂಗತಿ. ಇವೆಲ್ಲಾ ಬಿಟ್ಟು ತಮ್ಮ ಗುರಿಯತ್ತ ಗಮನ ಕೊಡಬೇಕು. ನಮ್ಮ ಕರ್ನಾಟಕದ ಮಕ್ಕಳು ಭಾರತಕ್ಕೆ ಒಲಂಪಿಕ್ಸ್ ನಂತಹ ಟೂರ್ನಿಯಲ್ಲಿ ಪಾಲ್ಗೊಂಡು ಚಿನ್ನದ ಪದಕಗಳನ್ನು ತಂದು ಕೊಡಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹದಾಯಕವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ದೈಹಿಕ ಶಿಕ್ಷಣ ಶಿಕ್ಷಕರು ಎಲ್ಲ ಕ್ರೀಡೆಗೆ ಹೆಚ್ಚಿನ ಸಹಕಾರ ಕೊಡುತ್ತಿದ್ದು, ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಗೆಲುವು ಪಡೆದು ರಾಜ್ಯ ಮಟ್ಟದಲ್ಲೂ ಸ್ಥಾನ ಗಳಿಸುವ ಮೂಲಕ ಹಾಸನ ಜಿಲ್ಲೆಯ ಪ್ರತಿಷ್ಠೆಯನ್ನು ಎತ್ತಿ ಹಿಡಿಯಬೇಕಾಗಿದೆ. ಉತ್ತಮ ತರಬೇತಿಯನ್ನು ಪಡೆದು ಜಿಲ್ಲೆಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.
ಇದೆ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಹದೇವ್, ತಾಲೂಕು ದೈಹಿಕ ಪರಿವೀಕ್ಷಕ ವೇದಣ್ಣ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚಕ್ರಪಾಣಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಸಿ.ಕೆ. ರಘು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.