

ಬೀದರ್: ಮೊಬೈಲ್ ನೋಡುತ್ತಿದ್ದರೆ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಹೀಗಾಗಿ ತಲೆಬಗ್ಗಿಸಿ ಅಧ್ಯಯನಕ್ಕೆ ಆದ್ಯತೆ ನೀಡಿದರೆ ಮುಂದೊಂದು ದಿನ ತಲೆ ಎತ್ತುವಂತೆ ಮಾಡುತ್ತದೆ ಎಂದು ಲಾಡಗೇರಿ ಮಠದ ಶ್ರೀ ಗಂಗಾಧರ ಶಿವಾಚಾರ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ಮೊಬೈಲ್ ಗೀಳು ಬಿಟ್ಟು ಪುಸ್ತಕಗಳತ್ತ ಚಿತ್ತ ಹರಿಸಬೇಕು. ಓದುವ ಹವ್ಯಾಸ ರೂಢಿಸಿಕೊಂಡರೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ (ಆಡಳಿತ) ಸುರೇಖಾ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಇಂಥ ಶಿಬಿರಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ರವೀಂದ್ರ ಗಬಾಡೆ ಮಾತನಾಡಿ, ಸುತ್ತಮುತ್ತಲಿನ ಪರಿಸರ ಹಾಗೂ ಮರ-ಗಿಡಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ಶಿಬಿರಾರ್ಥಿಯ ಕರ್ತವ್ಯ ಎಂದರು.
ಚಾಂಬಾಳ ಹಿರೇಮಠ ಸಂಸ್ಥಾನದ ಶ್ರೀ ರುದ್ರಮುನಿ ಶಿವಚಾರ್ಯ ಸಾನ್ನಿಧ್ಯ, ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ ವಾಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಪಿ.ವಿಠ್ಠಲರಡ್ಡಿ, ಉಪ ಪ್ರಾಂಶುಪಾಲ ಅನೀಲಕುಮಾರ ಆಣದೂರೆ, ಕುಮಾರಸ್ವಾಮಿ ಹಿರೇಮಠ ಇತರರಿದ್ದರು. ಡಾ.ದೀಪಾ ರಾಗಾ ಸ್ವಾಗತಿಸಿದರು. ಬಸವರಾಜ ಬಿರಾದಾರ್ ನಿರೂಪಣೆ ಮಾಡಿದರು. ನೂರ್ ಪಾಶಾ ವಂದಿಸಿದರು.
ಮನೆ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಮೂಢನಂಬಿಕೆಗಳನ್ನು ತಡೆಹಿಡಿದು ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಣದೊಂದಿಗೆ ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು.
| ಡಾ.ರಜನೀಶ ವಾಲಿ
ಹೈಕ ಶಿಕ್ಷಣ ಸಂಸ್ಥೆ ಸದಸ್ಯ