ಮೊಬೈಲ್ ಬಳಕೆಯಿಂದ ದೂರವಿರಿ

16BK4
 ಬಸವಕಲ್ಯಾಣದ ಡಾ.ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ೩೯ನೇ ಸಂಸ್ಥಾಪನಾ ದಿನಾಚರಣೆ, ದ್ವಿತೀಯ ಪಿಯುಸಿಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಭಾರತೀಯ ದಲಿತ ಪ್ಯಾಂಥರ ತಾಲೂಕು ಅಧ್ಯಕ್ಷ ರವಿ ಗಾಯಕವಾಡ ಉದ್ಘಾಟಿಸಿದರು. ದಿಲೀಪಕುಮಾರ ಉತ್ತಮ, ಸಂತೋಷಕುಮಾರ ಕೋರಾಳೆ, ನರಸಿಂಗರಾವ ಕಾಂಬಳೆ, ಡಾ.ಜೈಶೇನಪ್ರಸಾದ ಇತರರಿದ್ದರು.
Published on

ಬಸವಕಲ್ಯಾಣ: ಮೊಬೈಲ್ ಮೇಲೆ ಅತಿಯಾದ ಅವಲಂಬನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದು ಭಾರತೀಯ ದಲಿತ ಪ್ಯಾಂಥರ ತಾಲೂಕು ಅಧ್ಯಕ್ಷ ರವಿ ಗಾಯಕವಾಡ ಸಲಹೆ ನೀಡಿದರು.

ನಗರದ ಡಾ.ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾಲೇಜಿನ ೩೯ನೇ ಸಂಸ್ಥಾಪನಾ ದಿನಾಚರಣೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್‌ನಲ್ಲಿರುವ ಸಾಮಾಜಿಕ ಮಾಧ್ಯಮಗಳು ಮತ್ತು ಗೇಮಿಂಗ್‌ಗೆ ವಿದ್ಯಾರ್ಥಿಗಳು ಅಂಟಿಕೊಳ್ಳುವುದರಿಂದ ಅಧ್ಯಯನದಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕೌಶಲಗಳು ಕುಂಠಿತಗೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದೀಲಿಪಕುಮಾರ ಉತ್ತಮ ಮಾತನಾಡಿ, ವಿದ್ಯಾರ್ಥಿಗಳು ಸಮಯ ನಿರ್ವಹಣೆ, ಶ್ರಮ, ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ನಿರಂತರ ಕಲಿಕೆ, ಉತ್ತಮ ಆರೋಗ್ಯ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಗುರಿಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಸಂತೋಷಕುಮಾರ ಕೋರಾಳೆ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ದೀರ್ಘಾವಧಿ ದೃಷ್ಟಿಕೋನ ಇಟ್ಟುಕೊಂಡು, ಸಣ್ಣ ಸಣ್ಣ ಮೈಲಿಗಲ್ಲುಗಳನ್ನು ಸಾಧಿಸುವ ಮೂಲಕ ಗುರಿಗಳನ್ನು ತಲುಪಲು ಸಾಧ್ಯವಾಗುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಶಿಸ್ತುಬದ್ಧವಾಗಿ ಮಾಡಿದ್ದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ, ಮುಖಂಡ ಸುರೇಶ ಮೋರೆ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ನರಸಿಂಗರಾವ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಜೈಶೇನಪ್ರಸಾದ ಪ್ರಾಸ್ತಾವಿಕ ಮಾತನಾಡಿದರು.

ಪ್ರಮುಖರಾದ ಶಿವಾಜಿ ಶಿಂದೆ, ವಿನೋದ ಜಾಧವ್, ಮಂಜು ಸಿಂಧೆ, ವಿಲಾಸ ಜಾಧವ್, ಗೋಪಾಳ ಗಜರೆ ಇತರರಿದ್ದರು.ವಿಜಯಕುಮಾರ ರಾಯಪಳ್ಳೆ ಸ್ವಾಗತಿಸಿದರು. ನಿತ್ಯಾನಂದ ಮಂಠಾಳಕರ ವಂದಿಸಿದರು. ಶ್ರೀಧರ ಛಲವಾದಿ ನಿರೂಪಣೆ ಮಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಸನ್ಮಾನ ಪತ್ರ ನೀಡಿ, ಪ್ರೋತ್ಸಾಹಿಸಲಾಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸವಿ ನೆನಪಿನ ಕಾಣಿಕೆಯನ್ನು ನೀಡಿ ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net