ಮೊಬೈಲ್ ಬಳಕೆ ಖಿನ್ನತೆಗೆ ರಹದಾರಿ

MLK Kanonu 14
Published on

ಮೊಳಕಾಲ್ಮೂರು: ಮಕ್ಕಳ ಭವಿಷ್ಯ ರೂಪಿಸಲು ಹೆಚ್ಚು ಆಸಕ್ತಿ ವಹಿಸುತ್ತಿರುವ ಪಾಲಕರು, ಚಿಣ್ಣರ ಕೈಗೆ ಮೊಬೈಲ್ ಕೊಡುವ ಹವ್ಯಾಸ ಅಪಾಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಕೆ. ಗೋಣಿ ಎಚ್ಚರಿಸಿದರು.

ಮಾನಸಿಕ ಆರೋಗ್ಯ ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ಹಗಲು-ರಾತ್ರಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಪರಿಣಾಮ ಯುವಪೀಳಿಗೆ ಖಿನ್ನತೆಗೆ ಒಳಗಾಗುತ್ತಿದೆ. ಇದರಿಂದ ಹೊರತರುವ ಬಹುದೊಡ್ಡ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಕೈಯಲ್ಲಿದೆ ಎಂದರು.

ಚಿಕ್ಕ ಮಕ್ಕಳು ಕೂಡ ಊಟ, ನಿದ್ರೆಯತ್ತ ಅಸಡ್ಡೆ ತೋರುತ್ತ, ಮೊಬೈಲ್ ಬಳಕೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಆತಂಕದ ವಿಷಯ ಆಗಿದೆ. ಭವಿಷ್ಯದಲ್ಲಿ ಅವರು ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.

ಹೆಣ್ಣು ಈ ದೇಶದ ಕಣ್ಣು. ಪುರುಷ ಪ್ರಧಾನ ದೇಶದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕುಗಳನ್ನು ಮಹಿಳೆಗೆ ಕಲ್ಪಿಸಲಾಗಿದೆ. ಆದರೂ ಅವುಗಳ ಕುರಿತು ಮಾಹಿತಿ ನಮ್ಮಲ್ಲಿದೆ ಎಂದರು.

ಹುಟ್ಟಿದ ಹಾಗೂ ಗಂಡನ ಮನೆಗೆ ಕೀರ್ತಿ ತರುವ ರೀತಿ ಮಹಿಳೆ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಭವಿಷ್ಯದ ಬೆಳಕಿಗೆ ಶಿಕ್ಷಣವೇ ಬ್ರಹ್ಮಾಸ್ತ್ರ ಎಂಬ ಅರಿವು ಹೆಚ್ಚಾಗಬೇಕು. ಆಗ ಕುಟುಂಬ ಸದೃಢವಾಗಲಿದೆ ಎಂದು ಹೇಳಿದರು.

ಟಿಎಚ್‌ಒ ಡಾ.ಮಧುಕುಮಾರ್ ಮಾತನಾಡಿ, ಮಾನಸಿಕ ಖಿನ್ನತೆ ಸುಧಾರಣೆ ಅಷ್ಟು ಸುಲಭದ ಕೆಲಸವಲ್ಲ. ಧೀರ್ಘಕಾಲ ಮನುಷ್ಯನನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಆದ್ದರಿಂದ ದುಶ್ಚಟ, ಅಗತ್ಯಕ್ಕಿಂತ ಹೆಚ್ಚು ಮೊಬೈಲ್, ಟಿವಿ ಬಳಕೆ, ಸಮರ್ಯ ವ್ಯರ್ಥ ಮಾಡುವುದನ್ನು ಕೈಬಿಟ್ಟು, ಒಳ್ಳೆಯ ಹವ್ಯಾಸ ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ತಾಲೂಕಾಧ್ಯಕ್ಷ ಆರ್.ಆನಂದ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶೆ ಟಿ.ಕೆ.ಪ್ರಿಯಾಂಕಾ, ಸರ್ಕಾರಿ ಅಭಿಯೋಜಕ ಕೆ.ಮೊಹಮದ್ ಆಲಿ, ವಕೀಲೆ ಅನುಸೂಯಾ, ಆಡಳಿತಾಧಿಕಾರಿ ಡಾ.ಮಂಜುನಾಥ, ಸಿಡಿಪಿಒ ನವೀನ್‌ಕುಮಾರ ಇದ್ದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net