ಮೊಬೈಲ್ ಬಳಕೆ ಇತಿಮಿತವಾಗಿರಲಿ: ಜಿ.ಟಿ.ದೇವೇಗೌಡ ಸಲಹೆ

mysore
Published on

ಮೈಸೂರು: ಮೊಬೈಲ್ ಬಿಟ್ಟು ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳು ಗಮನ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಶ್ರೀ ನಟರಾಜ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ವೇದಿಕೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಗಮನ ಕೇಂದ್ರೀಕರಿಸುತ್ತಿಲ್ಲ. ಬದಲಿಗೆ ಮೊಬೈಲ್‌ನಲ್ಲೇ ಮುಳುಗಿ ಹೋಗಿರುತ್ತಾರೆ. ಇದು ಭವಿಷ್ಯಕ್ಕೆ ಕಂಟಕವಾಗಲಿದೆ. ಮೊಬೈಲ್‌ನಿಂದ ಉಪಯುಕ್ತ ಮಾಹಿತಿ ಪಡೆದುಕೊಳ್ಳಬೇಕು. ಮೊಬೈಲ್ ಅನ್ನು ಇತಿಮಿತಿಯಾಗಿ ಬಳಸುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಸರಳತೆ ಮೈಗೂಡಿಸಿಕೊಳ್ಳುವುದರ ಜತೆಗೆ ಸಂಸ್ಕಾರಯುತ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಪಡೆದ ಮಕ್ಕಳು ಇಂದು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಹೀಗಾಗಿ ನೀವೇ ಉದ್ಯೋಗದಾತರಾಗಬೇಕು. ಅಂತಹ ಗುಣಾತ್ಮಕ, ಕೌಶಲಾಧಾರಿತ ಶಿಕ್ಷಣ ಪಡೆಯಲು ಶ್ರಮಪಟ್ಟು ಓದಬೇಕು. ಈ ಹಂತದಲ್ಲಿ ಹಲವು ಕಷ್ಟಗಳು, ಅಡಚಣೆಗಳು ಬರುತ್ತದೆ. ಅವನ್ನೆಲ್ಲ ಮೆಟ್ಟಿನಿಂತು ಗುರಿಯನ್ನು ಮುಟ್ಟಬೇಕು ಎಂದು ಹೇಳಿದರು.

ಮದರ್ ತೆರೇಸಾ, ಸಾವಿತ್ರಿಬಾಯಿ ಫುಲೆ, ಇಂದಿರಾಗಾಂಧಿ, ಅಕ್ಕಮಹಾದೇವಿ, ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್, ಬಸವಣ್ಣ ಅವರಂತಹ ಮಹನೀಯರು ಸರಳವಾಗಿ ಬದುಕಿದರು. ಸಮಾಜಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿದ ಕಾರಣಕ್ಕೆ ಇವತ್ತಿಗೂ ಅವರನ್ನು ಸ್ಮರಿಸಲಾಗುತ್ತದೆ. ಇವರ ಬಗ್ಗೆ ಓದಿ ತಿಳಿದುಕೊಂಡು ಸ್ಫೂರ್ತಿ ಪಡೆದುಕೊಳ್ಳಬೇಕು ಎಂದರು.

ಹಿಂದೆ ಮಹಿಳೆ ಅಬಲೆ ಎಂದು ಹೇಳುತ್ತಿದ್ದರು. ಕಾಲ ಬದಲಾಗಿದೆ. ಮಹಿಳೆಯರು ಇಂದು ಸಬಲರಾಗಿದ್ದಾರೆ. ಮನೆಯನ್ನು ನಡೆಸುವುದರಿಂದ ಹಿಡಿದು ದೇಶವನ್ನು ಮುನ್ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ತಿಳಿಸಿದರು.

ಮದುವೆಗಾಗಿ ಜಮೀನು ಮಾರದೆ ಉಡುಗೊರೆಯಾಗಿ ನೀಡಿದರೆ ಬದುಕಿಗೆ ಸಹಾಯವಾಗುತ್ತದೆ ಎಂದರು.

ಸರಳವಾಗಿ ಬದುಕುವುದನ್ನು ಕಲಿಯಬೇಕು. ಅದರಲ್ಲೇ ಸಂತೋಷವನ್ನು ಕಾಣಬೇಕು. ಪಾಲಕರು ತಮ್ಮ ಪ್ರತಿಷ್ಠೆ ತೋರಿಸಿಕೊಳ್ಳುವ ಸಲುವಾಗಿ ತಮ್ಮ ಮಕ್ಕಳ ಮದುವೆಯನ್ನು ಬಹಳ ಆಡಂಬರದಿಂದ ಮಾಡಲು ತಮ್ಮ ಜಮೀನು ಮಾರುತ್ತಾರೆ. ಇದರಿಂದ ಪಾಲಕರು ಸಾಲಗಾರರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಿವಿಧ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ, ಮೈವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಆರ್.ಶಿವಪ್ಪ, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಿ.ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net