ಮೊಬೈಲ್ ಫೋನ್‌ನಿಂದ ಮಕ್ಕಳನ್ನು ದೂರವಿಡಿ: ಮನೋವೈದ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ

4web
Published on

ಮೈಸೂರು: ಮಕ್ಕಳ ಬುದ್ಧಿಶಕ್ತಿ ವೃದ್ಧಿಸಿ, ಸಮಾಜಮುಖಿಯಾಗಿ ಬೆಳೆಸಬೇಕಾದರೆ ಅವರನ್ನು ಮೊಬೈಲ್ ಬಳಕೆಯಿಂದ ಪಾಲಕರು ದೂರವಿಡಬೇಕು ಎಂದು ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಸಲಹೆ ನೀಡಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಗರದ ಹೆಬ್ಬಾಳಿನಲ್ಲಿರುವ ದಿ ರಿವೈವ್ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆತ್ಮಹತ್ಯೆ ತಡೆ’ ಉಚಿತ ಸಹಾಯವಾಣಿ ಹಾಗೂ ಒಂದು ತಿಂಗಳ ಮಾನಸಿಕ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಬಳಕೆ ಹೆಚ್ಚಾಯಿತು. ಸೋಂಕು ತಗ್ಗಿದ ಬಳಿಕ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಒಗ್ಗಿಸುವುದು, ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಈಗ ಶಿಕ್ಷಕರು ಹಾಗೂ ಪಾಲಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಹಲವು ಮಕ್ಕಳು ಮೊಬೈಲ್ ಚಟಕ್ಕೆ ಅಂಟಿಕೊಂಡಿದ್ದು, ಬಿಡಿಸುವುದು ಹೇಗೆ ಎನ್ನುವ ಚಿಂತೆ ಎಲ್ಲರನ್ನು ಕಾಡುತ್ತಿದೆ. ಹಾಗಾಗಿ, ಮಕ್ಕಳು ಬುದ್ಧಿಶಕ್ತಿ ಹೆಚ್ಚಿಕೊಂಡು ಸಮಾಜಮುಖಿಯಾಗಿ ಬೆಳೆಯಲು ಪಾಲಕರು ಬಹುಜಾಣ್ಮೆಯಿಂದ ಮೊಬೈಲ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಮೊಬೈಲ್ ಆಸೆ ತೋರಿಸಿ ಊಟ ಮಾಡಿಸುವ ಅಥವಾ ಕೆಲಸ ಮಾಡಿಸಿಕೊಳ್ಳುವ ಆಸೆ ತೋರಿಸುವುದು ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದಲ್ಲದೆ ಹೆಚ್ಚು ಕಾಲ ಮೊಬೈಲ್ ನೋಡುವುದರಿಂದ ಕಣ್ಣು, ಬುದ್ಧಿಶಕ್ತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಆಸ್ಪತ್ರೆಯ ಕಾರ್ಯಕಾರಿ ಸಮಿತಿ ನಿರ್ದೇಶಕ, ಮನೋವೈದ್ಯ ಡಾ.ಕೆ.ಆರ್.ಕೃಷ್ಣ ಮಾತನಾಡಿ, ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಅವರ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಮೊಬೈಲ್ ದೊರೆಯದಿದ್ದರೆ ಚಡಪಡಿಕೆ, ಸಿಡುಕು ಸೇರಿದಂತೆ ಇನ್ನಿತರ ನಡವಳಿಕೆ ದೋಷಗಳು ಕಂಡುಬರುತ್ತವೆ. ಹೀಗಾಗಿ ಮೊಬೈಲ್ ನೀಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕಾರಿ ಸಮಿತಿ ನಿರ್ದೇಶಕ ಪವನ್‌ನಾಗ್ ಮಾತನಾಡಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯಕರ ನಡವಳಿಕೆ ಹೊಂದಿರಬೇಕು. ಯಾವುದೇ ಕೊರತೆಯಾದರೂ ಮನಸ್ಸಿನ ಮೇಲೆ ಪರಿಣಾಮ ಬೀರಿ ಉತ್ತಮ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ಆಸ್ಪತ್ರೆಯ ನಿರ್ದೇಶಕ ಡಾ.ವಿ.ಮೋಹನ್‌ಕುಮಾರ್ ಮಾತನಾಡಿ, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ಪಂದಿಸಲು ಆಸ್ಪತ್ರೆಯಿಂದ ಬೆಳಗ್ಗೆ 8 ರಿಂದ ರಾತ್ರಿ 12 ರವರೆಗೆ ‘ಆತ್ಮಹತ್ಯೆ ತಡೆ’ ಉಚಿತ ಸಹಾಯವಾಣಿ ಆರಂಭಿಸಲಾಗಿದೆ. ಅ.10 ರಿಂದ ಒಂದು ತಿಂಗಳ ಕಾಲ ಮಾನಸಿಕ ಸಮಸ್ಯೆಗಳ ಉಚಿತ ತಪಾಸಣೆ ಶಿಬಿರ ಆಯೋಜಿಸಿದ್ದು ಈ ಸೌಲಭ್ಯ ಬಳಕೆ ಮಾಡಿಕೊಳ್ಳುವಂತೆ ಕೋರಿದರು.
ಡಾ.ಸಿ.ಆರ್. ಚಂದ್ರಶೇಖರ್ ಅವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ರಚಿಸಿರುವ ‘ವಿದ್ಯಾರ್ಥಿಗಳಿಗಾಗಿ 15 ಕೌಶಲ್ಯಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net