ಮೊಬೈಲ್, ಟಿವಿಗಳ ಭರಾಟೆಯಿಂದ ಪತ್ರಿಕೆಗಳು ಮರೆಗೆ

ಫೋಟೋ ಶೀರ್ಷಿಕೆ 20ಸಿಆರ್_ಪಿ-2ಎ
ಚನ್ನರಾಯಪಟ್ಟಣದಲ್ಲಿನ ಜ್ಞಾನಸಾಗರ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಪತ್ರಿಕೆಗಳ ಪ್ರದರ್ಶನವನ್ನು ಡಿವೈಎಸ್‌ಪಿ ಪಿ.ರವಿಪ್ರಸಾದ್, ಡಾ.ನಾಗೇಶ್, ಡಾ.ಶೇಷಶಯನ, ಡಾ.ಭಾರತೀ ನಾಗೇಶ್, ಪುಟ್ಟಣ್ಣ, ಜಯರಾಂ ವೀಕ್ಷಿಸಿದರು.
Published on

ಚನ್ನರಾಯಪಟ್ಟಣ: ಇತ್ತೀಚಿನ ವಿದ್ಯಮಾನಗಳಲ್ಲಿ ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆಧುನಿಕತೆಯ ಪ್ರಭಾವ ಮೊಬೈಲ್, ಟಿವಿಗಳ ಭರಾಟೆಯಿಂದ ಪತ್ರಿಕೆಗಳು ತೆರೆಮರೆಗೆ ಸರಿಯುತ್ತಿವೆ ಎಂದು ಚನ್ನರಾಯಪಟ್ಟಣ ಡಿವೈಎಸ್ಪಿ ಪಿ.ರವಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಜ್ಞಾನಸಾಗರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಪತ್ರಿಕಾ ವಿತರಕರ ಸಂಘ ಇತ್ತೀಚೆಗೆ ಆಯೋಜಿಸಿದ್ದ ಗೌರಿ-ಗಣೇಶ ಸಂಭ್ರಮ ಮತ್ತು ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು ದಿನಪತ್ರಿಕೆ, ಪುಸ್ತಕಗಳನ್ನು ಓದುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಿತಗೊಳಿಸಿ ಒಳ್ಳೆಯ ವಿಷಯ, ಮಾಹಿತಿಗಳ ಗ್ರಹಿಕೆಗಷ್ಟೇ ಮೊಬೈಲ್ ಬಳಸಬೇಕು. ಪುಸ್ತಕ, ಪತ್ರಿಕೆಗಳನ್ನು ಓದುವುದರಿಂದ ವಿಷಯಗಳ ಮನನ ಆಗಲಿದೆ. ನೆನಪಿನಲ್ಲಿ ದೀರ್ಘ ಕಾಲದವರೆಗೆ ಓದಿದ್ದು ಉಳಿಯಲು ಸಾಧ್ಯವಾಗಲಿದೆ. ದೃಶ್ಯದ ಮೂಲಕ ನೋಡಿದ್ದು ಹೆಚ್ಚು ದಿನ ನಿಮ್ಮ ತಲೆಯಲ್ಲಿ ಇರುವುದಿಲ್ಲ. ಆದ್ದರಿಂದ ಪುಸ್ತಕ, ಪತ್ರಿಕೆಗಳ ಓದುವ ಹವ್ಯಾಸ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಗೇಶ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ನಾಗೇಶ್ ಮಾತನಾಡಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಂತಹ ಮಹಾನ್ ವ್ಯಕ್ತಿ ಪತ್ರಿಕೆಗಳನ್ನು ಮನೆ ಮನೆಗೆ ಹಾಕಿ ಬೆಳೆದವರು. ಪತ್ರಿಕೆ ಹಾಕುವುದನ್ನು ಕೀಳರಿಮೆ ಎಂದು ಭಾವಿಸಬಾರದು. ಪ್ರತಿ ಮನುಷ್ಯ ತನ್ನದೇ ಆದ ವೃತ್ತಿಯನ್ನು ಅವಲಂಬಿಸಿರುತ್ತಾನೆ. ಆದರೆ ನೀವು ಮಾಡುವ ವೃತ್ತಿಯನ್ನು ಹೆಚ್ಚು ಪ್ರಾಮಾಣಿಕತೆ, ಶ್ರದ್ಧೆಯಿಂದ ಮಾಡಬೇಕು ಎಂದರು.
ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಗೋಕಾಕ್ ಪುಟ್ಟಣ್ಣ, ಡಾ.ಶೇಷಶಯನ ಮಾತನಾಡಿದರು. ಪಟ್ಟಣದ ಗಾಂಧಿ ವೃದ್ಧಾಶ್ರಮದ ತಾಯಂದಿರಿಗೆ ಗೌರಿ-ಗಣೇಶ ಹಬ್ಬದ ಸಲುವಾಗಿ ಬಾಗಿನ ಸಮರ್ಪಿಸಲಾಯಿತು. ಇದೇ ವೇಳೆ ಪತ್ರಿಕಾ ವಿತರಕರ ಸಂಘದ ಕಾರ್ಯದರ್ಶಿ ಎ.ಎಂ.ಜಯರಾಂ ಜ್ಞಾನಸಾಗರ ಶಾಲೆಯ ಹಳೇ ವಿದ್ಯಾರ್ಥಿ ಡಾ.ಧನುಶ್ರೀ, ಮತ್ತು ರಾಷ್ಟ್ರ ಮಟ್ಟದ ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ ಶಾಲೆಯ ಎಂ.ರಿತೇಶ್ ಹಾಗೂ ವರ್ಲಿ ಚಿತ್ರಕಲೆಯಲ್ಲಿ ವಿಶ್ವ ದಾಖಲೆ ಮಾಡಿದ ಎನ್.ಪಿ. ವರ್ಷಿಣಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ನಿವೃತ್ತ ಸಹಾಯಕ ಆಧೀಕ್ಷಕ ಎಚ್.ಎಂ.ನಾಗಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಜ್ಞಾನಸಾಗರ ಶಾಲಾ ಆಡಳಿತ ಮಂಡಳಿ ಸಿಇಒ ಡಾ.ಭಾರತೀ ನಾಗೇಶ್, ಡೀನ್ ಡಾ.ಸುಜಾ ಪಿಲಿಫ್ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net