ಮೊಬೈಲ್ ಗೀಳು ಕ್ರಿಯಾಶೀಲತೆ ಹಾಳು

CTD 26 Prathibhothsava ---01
Published on


ಆವಿಷ್ಕಾರಗಳಿಂದ ನೈತಿಕ ಮೌಲ್ಯ ಕುಸಿತ ಡಾ.ಅಶೋಕ್‌ಕುಮಾರ್ ಆತಂಕ ಚಿತ್ರದುರ್ಗದಲ್ಲಿ ಪ್ರತಿಭೊತ್ಸವ
ಚಿತ್ರದುರ್ಗ: ಅನಗತ್ಯ ಮೊಬೈಲ್ ಬಳಕೆಯಿಂದಾಗಿ ಯುವಸಮೂಹ, ಮಕ್ಕಳಲ್ಲಿನ ಕ್ರಿಯಾಶೀಲತೆ ಹಾಳಾಗುತ್ತಿದ್ದು, ಲಕ್ಷಾಂತರ ಜನರ ಬದುಕನ್ನು ಕಿತ್ತುಕೊಂಡಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಅಶೋಕ್‌ಕುಮಾರ್ ಸಂಗೇನಹಳ್ಳಿ ಆತಂಕ ವ್ಯಕ್ತಪಡಿಸಿದರು.

ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿವಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯುಎಸಿ ವಿಭಾಗದಿಂದ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನರ ದಿಕ್ಕು ತಪ್ಪಿಸುವ ಆವಿಷ್ಕಾರಗಳಿಂದ ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿವೆ. ಈ ಕುರಿತು ಎಚ್ಚರ ವಹಿಸಬೇಕಿದೆ. ಸಮಯ ಪ್ರಜ್ಞೆ, ಏಕಾಗ್ರತೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಪ್ರತಿಭೆ ಹೊರಹಾಕಿ ಇತರರಿಗೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಾರ್ಥಕ ಬದುಕು ಕಟ್ಟಿಕೊಳ್ಳಲು ಧೃಡ ಸಂಕಲ್ಪ ಹೊಂದಿ ಗಟ್ಟಿಯಾಗಿ ನಿಲ್ಲಬೇಕು. ನಿರ್ಮಾಪಕ, ನಿರ್ದೇಶಕ, ನಾಯಕನಟ ನೀವುಗಳೇ ಆಗಿದ್ದು, ದ್ವೇಷ ಬಿಟ್ಟು ಮುನ್ನುಗ್ಗುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಡಾ.ಎಚ್.ಗುಡ್ಡದೇಶ್ವರಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಲ್ಲಿ ಉತ್ತಮ ಬದುಕನ್ನು ರೂಪಿಸಿಕೊಂಡು ಸದೃಢ ಸಮಾಜ ಕಟ್ಟಲು ಸಾಧ್ಯವಾಗಲಿದೆ. ಮಹಿಳೆಯರು ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದು, ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ ಎಂದರು.
ಇದೇ ವೇಳೆ 2021-22ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಪಡೆದ ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಎನ್‌ಎಸ್‌ಎಸ್, ವಾಲಿಬಾಲ್, ಥ್ರೋಬಾಲ್, ಓಟ, ಚೆಸ್, ಭರತನಾಟ್ಯ, ಭಾವಗೀತೆ, ಚರ್ಚಾ, ಯೋಗ, ಪ್ರಬಂಧ, ಆಶುಭಾಷಣ, ಏಕಪಾತ್ರಾಭಿನಯ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎನ್‌ಎಸ್‌ಎಸ್ ಸಂಚಾಲಕ ಡಾ.ಸಿ.ಚನ್ನಕೇಶವ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಮಂಜುನಾಥ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಆರ್.ಲೀಲಾವತಿ, ಕ್ರೀಡಾ ಸಮಿತಿ ಸಂಚಾಲಕ ಆರ್.ಶಿವಪ್ರಸಾದ್, ಗ್ರಂಥಪಾಲಕ ಬಿ.ಎಚ್.ಕುಮಾರಸ್ವಾಮಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿದ್ಧಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net