ಮೊಬೈಲ್ ಕ್ಲಿನಿಕ್‌ಗೆ ಉತ್ತಮ ಸ್ಪಂದನೆ, ಮನೆಗಳಿಗೆ ತೆರಳಿ ವೈದ್ಯಕೀಯ ಸೌಲಭ್ಯ

21 Nela Ph 03 Tapasane
Published on

ನೆಲಮಂಗಲ: ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಜನರ ಮನೆ ಬಾಗಿಲಿಗೆ ವೈದ್ಯರ ತಂಡ ಕಳಿಹಿಸುವ ನಿಟ್ಟಿನಲ್ಲಿ ಆರಂಭಿಸಿರುವ ಕೋವಿಡ್ ಸಂಚಾರಿ ಕ್ಲಿನಿಕ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಮೇ 17ರಂದು ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಹಸೀಲ್ದಾರ್ ಕೆ. ಮಂಜುನಾಥ್ ಅವರು ಕೋವಿಡ್ ಸಂಚಾರಿ ಕ್ಲಿನಿಕ್‌ಗೆ ಚಾಲನೆ ನೀಡಿದ್ದರು. ಈ ಕ್ಲಿನಿಕ್‌ನ ಸದಸ್ಯರು ಕರೊನಾ ಸೋಂಕಿತರು ಪತ್ತೆಯಾಗಿರುವ ವ್ಯಕ್ತಿಗಳು ಇರುವ ಮನೆಗಳಿಗೆ ತೆರಳಿ, ಪ್ರಾಥಮಿಕ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ವೈದ್ಯಕೀಯ ಸೌಲಭ್ಯ, ಆಕ್ಸಿಜನ್ ಸ್ಯಾಚುರೇಷನ್ ಪರೀಕ್ಷೆ ಮಾಡುತ್ತಿದ್ದು, ಅಗತ್ಯವಾದಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ವ್ಯಕ್ತಿಗಳಿಗೆ ತಾಲೂಕು ಆಡಳಿತ ವೈದ್ಯಕೀಯ ಸೌಲಭ್ಯ, ಆಕ್ಸಿಜನ್ ಸ್ಯಾಚುರೇಷನ್ ಪರೀಕ್ಷೆ, ಅಗತ್ಯ ಚಿಕಿತ್ಸೆ ಸೇರಿ ಔಷಧ ಕಿಟ್ ವಿತರಿಸುತ್ತಿದ್ದಾರೆ. ಸೋಂಕಿತರ ಕುಟುಂಬಸ್ಥರು ಆಸ್ಪತ್ರೆಯ ಬಳಿ ಕಾದು ತಪಾಸಣೆ ಮಾಡಿಸಿಕೊಳ್ಳುವ ತಾಪತ್ರಯ ತಪ್ಪಿದೆ. ಜತೆಗೆ ಸೋಂಕಿನ ಜತೆ ಹೋರಾಡುವ ಧೈರ್ಯವೂ ಬಂದಿದೆ ಎಂದು ಕೋವಿಡ್ ಸಂಚಾರಿ ಕ್ಲಿನಿಕ್‌ನ ಲಾಭ ಪಡೆದ ವಾಜರಹಳ್ಳಿಯ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.

1,500ಕ್ಕೂ ಹೆಚ್ಚು ಜನರ ತಪಾಸಣೆ: ತಾಲೂಕಿದಾದ್ಯಂತ 252 ಗ್ರಾಮಗಳಿವೆ. 100ಕ್ಕೂ ಹೆಚ್ಚು ಗ್ರಾಮಗಳು ಹಾಗೂ ನಗರಸಭೆಯ 6 ವಾರ್ಡ್‌ಗಳಲ್ಲಿ ಸಂಚಾರಿ ಕ್ಲಿನಿಕ್ ಸದಸ್ಯರು ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 1500ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆ ಮಾಡಿದ್ದಾರೆ. 1,300ಕ್ಕೂ ಹೆಚ್ಚು ಮಂದಿಗೆ ಔಷಧದ ಕಿಟ್ ವಿತರಿಸಿದ್ದಾರೆ. 6 ಮಂದಿಯಲ್ಲಿ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆ ಇದ್ದ ಕಾರಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಆಕ್ಸಿಜನ್ ಕೊಡಿಸಿದ್ದಾರೆ.

ಕೋವಿಡ್ ಸಂಚಾರಿ ಕ್ಲಿನಿಕ್‌ಗಾಗಿ 15 ವಾಹನಗಳನ್ನು ಒದಗಿಸಲಾಗಿದೆ. 20 ಮಂದಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪಿಡಿಒ, ಗ್ರಾಮಲೆಕ್ಕಾಧಿಕಾರಿ, ಅಂಗವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇರುವ ವಿಶೇಷ ತಂಡ ರಚಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಜನರು ವೈದ್ಯರಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಕೆ. ಮಂಜುನಾಥ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net