ತಿಪಟೂರು: ನಗರದ ಸಿ.ಕೆ.ಮೊಬೈಲ್ಸ್ ಅಂಗಡಿಯ ರೋಲಿಂಗ್ ಶೆಟರ್ ಮೀಟಿ ಅಂಗಡಿಯಲ್ಲಿದ್ದ 7 ಮೊಬೈಲು ಮತ್ತು 18 ಸಾವಿರ ರೂ. ನಗದು ಕಳ್ಳತನ ಪ್ರಕರಣದ ಆರೋಪಿಯನ್ನು ಬುಧವಾರ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಎನ್.ಆರ್.ಕಾಲನಿಯ ನಿವಾಸಿ ಗಣೇಶ್ (25) ಬಂಧಿತ. ಈತ ೆ.1ರಂದು ಬೆಳಗಿನ ಜಾವ ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಸ್ಪಿ ಕೆ.ವಿ.ಅಶೋಕ್ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ವಿನಾಯಕ್ ಎನ್.ಶಟಗೇರಿ ನೇತೃತ್ವದಲ್ಲಿ ನಗರಠಾಣೆಯ ವೆಂಕಟೇಶ್. ಪಿಎಸ್ಐ ಡಿ.ಕೃಷ್ಣಪ್ಪ ಮತ್ತು ಸಿಬ್ಬಂದಿ ಜಿ.ಅರ್.ಲೋಕೇಶ್, ಸಾಗರ್ಅಂಬಿಗೇರ್, ಚನ್ನೇಗೌಡ, ಯತೀಶ್ಕುಮಾರ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, 16 ಸಾವಿರ ನಗದು, 75 ಸಾವಿರ ಬೆಲೆಯ 7 ಮೊಬೈಲು ಮತ್ತು ಕೃತ್ಯಕ್ಕೆ ಬಳಸಿದ ಕಬ್ಬಿಣದ ಹಾರೆ ವಶಪಡಿಸಿಕೊಂಡಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ ಗಣೇಶ್, ಮೊಬೈಲ್ ಕಳ್ಳತನಕ್ಕೂ ಮುಂಚೆ ಕೊರಟಗೆರೆಯಲ್ಲಿ ಹೀರೋ ಹೋಂಡಾ ಬೈಕ್ ಕಳ್ಳತನ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಂಡದ ಸಿಬ್ಬಂದಿಯನ್ನು ಎಸ್ಪಿ ಕೆ.ವಿ. ಅಶೋಕ್ ಅಭಿನಂದಿಸಿದ್ದಾರೆ.