

ಸೋಮವಾರಪೇಟೆ: ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಸಮೀಕ್ಷೆ ಸಂದರ್ಭ ಮೊಬೈಲ್ ಆ್ಯಪ್ ಸಮಸ್ಯೆಯಿಂದ ಶಿಕ್ಷಕರು ಪರದಾಡುತ್ತಿರುವುದು ಕಂಡುಬಂದಿದ್ದು, ಕೆಲ ಶಿಕ್ಷಕರು ಸಮಸ್ಯೆಯ ಕುರಿತು ತಾಲೂಕು ತಹಸೀಲ್ದಾರ್ ಗಮನಕ್ಕೆ ತಂದಿದ್ದಾರೆ.
ತಹಸೀಲ್ದಾರ್ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಣತಿದಾರ ಶಿಕ್ಷಕರು ಮನೆಗಳಿಗೆ ಭೇಟಿ ಮಾಡಿದ ಸಂದರ್ಭ ತಾಂತ್ರಿಕ ದೋಷ ಕಂಡು ಬರುತ್ತಿದ್ದು, ಮೊಬೈಲ್ ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ. ಒಟಿಪಿ ಮತ್ತು ಒಡಿಪಿ ಬರುತ್ತಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಗಣತಿ ಸಂದರ್ಭ ಒಂದೇ ಬಡಾವಣೆಯಲ್ಲಿ ಎದುರಿನ ಮನೆ ಯುಎಚ್‌ಐಡಿ ಸಂಖ್ಯೆ ಇರುವುದಿಲ್ಲ, ವಿಭಿನ್ನ ರೀತಿಯಲ್ಲಿ ಹಂಚಿಕೆ ಆಗಿದೆ.
ತಾಲೂಕಿನ ಗಡಿಭಾಗವಾದ ಬೆಟ್ಟದಳ್ಳಿ ಪಂಚಾಯಿತಿ ವ್ಯಾಪ್ತಿಗೆ ಗಣತಿಗೆ ತೆರಳಿದ ಶಿಕ್ಷಕರೊಬ್ಬರು ಜಿಗಣೆ ಕಚ್ಚಿದ ಹಿನ್ನೆಲೆಯಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗಿದ್ದು, ಗಣತಿ ಕಾರ್ಯದಿಂದ ಬಿಡುಗಡೆ ಮಾಡಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಬಹುತೇಕ ಮನೆಗಳಲ್ಲಿ ಯುಎಚ್‌ಐಡಿ ಸಂಖ್ಯೆ ಮಳೆ ನೀರಿಂದ ತೊಯ್ದು ಸಂಖ್ಯೆಗಳು ಮಾಯವಾಗಿರುವುದರಿಂದ ಸಮಸ್ಯೆಯಾಗಿದೆ. ಶ್ವಾನಗಳ ಹಾವಳಿಯಿಂದ ಶಿಕ್ಷಕರು ಬೆದರಿ ಸ್ಥಳದಿಂದ ಪಲಾಯನ ಮಾಡಿದ ಘಟನೆಯೂ ನಡೆದಿದೆ.