

ಚಿಂಚೋಳಿ: ಜನ್ಮ, ನಾಮ, ಜಾತಿ, ಗೋತ್ರವಿಲ್ಲದವನೇ ಶಿವ ಎಂದು ಸಾರಿದ ಬಸವಣ್ಣನವರ ವಿಚಾರಗಳನ್ನು ಅರಿಯುವುದೇ ಶಿವಾನುಭವ ಚಿಂತನವಾಗಿದೆ ಎಂದು ಕನ್ನಡದ ಕಬೀರ ಇಬ್ರಾಹಿಂ ಸುತಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಥೇರ್ ಮೈದಾನದಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳ 69ನೇ ಜಾತ್ರೋತ್ಸವ ನಿಮಿತ್ತ ಮಂಗಳವಾರ ರಾತ್ರಿ ಆಯೋಜಿಸಿದ ಶಿವಾನುಭವ ಚಿಂತನ ಸಭೆಯಲ್ಲಿ ಚನ್ನಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಅಧ್ಯಾತ್ಮದ ದಾರಿ ತೋರುತ್ತ ಬಂದಿರುವ ಗುರು ಪರಂಪರೆಯ ಕೊಡುಗೆ ಅಪಾರವಾಗಿದೆ. ಮಸೀದಿ- ಮಂದಿರ ಕೆಡವಲು ಕಿತ್ತಾಡಬಾರದು, ಮನ ಪರಿವರ್ತನೆಗೆ ಮುಂದಾಗಬೇಕು. ಸರ್ವಧರ್ಮ ಸಮನ್ವಯದ ಆಕಾರ ಮೂರ್ತಿ, ವಿವಿಧತೆಯಲ್ಲಿ ಏಕತೆ ಕಾಣುವ ಪುಣ್ಯಕ್ಷೇತ್ರ ಚಿಂಚೋಳಿಯಾಗಿದೆ ಎಂದು ನುಡಿದರು.
ಏನಾದರೂ ಆಗು ಮೊದಲು ಮಾನವನಾಗು ಎಂಬ ಸತ್ಯವನ್ನು ಅರಿತು ನಡೆದರೇ ಬದುಕು ಸಾರ್ಥಕವಾಗುತ್ತದೆ. ಗುರು ಚರಮೂರ್ತಿಗಳು ಯಾವುದೇ ಒಂದು ಜಾತಿ, ಧರ್ಮ, ನಾಡಿಗೆ ಸೀಮಿತವಿಲ್ಲ, ಅವರು ಇಡೀ ಜಗತ್ತಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ. ಶಿವಯೋಗಿಗಳ ಜಾತ್ರೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ನೀಡಿದೆ ಎಂದರು.
ಸಂಸದ ಡಾ.ಉಮೇಶ ಜಾಧವ್, ಶಾಸಕ ಡಾ.ಅವಿನಾಶ ಜಾಧವ್, ಕಾಂಗ್ರೆಸ್ ವಕ್ತಾರ ಸುಭಾಷ ರಾಠೋಡ್, ಸಂತೋಷ ಗಡಂತಿ ಮಾತನಾಡಿದರು.
ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಡಿವೈಎಸ್ಪಿ ಇ.ಎಸ್. ವೀರಭದ್ರಯ್ಯ, ಪ್ರಮುಖರಾದ ವಿಕ್ರಮ ಪಾಟೀಲ್, ಗೌತಮ ಪಾಟೀಲ್, ಅಜೀತ ಪಾಟೀಲ್, ಸಂತೋಷ ಗಡಂತಿ, ಶ್ರೀಮಂತ ಕಟ್ಟಿಮನಿ, ನಾಗೇಶ ಭದ್ರಶೆಟ್ಟಿ, ರಾಜಕುಮಾರ ಮಜ್ಜಗಿ, ರೇವಣಸಿದ್ದಪ್ಪ ಮಜ್ಜಗಿ, ವಿರುಪಾಕ್ಷಪ್ಪ ಯಂಪಳ್ಳಿ, ಅಮರ ಬಬಲಾದಿ, ವಸಂತಿ ಇಟಗಿ, ದತ್ತಪ್ಪ ತಳವಾರ, ಶಾಂತವೀರ ಸುಂಕದ, ರೇಣುಕಾಬಾಯಿ ಚವ್ಹಾಣ್, ನಾಗಪ್ಪ ಮಾಸ್ಟರ್, ಕೆ.ಎಂ. ಬಾರಿ, ರಾಮಚಂದ್ರ ಜಾಧವ್ ಇದ್ದರು.
ಇಂದಿನ ಆಧುನಿಕ ಯುಗದಲ್ಲಿ ಜಾತಿ ಎಂಬುದು ಬಿಟ್ಟು, ಭಕ್ತಿಯ ಬೀಜ ಬಿತ್ತಲು ಎಲ್ಲರೂ ಮುಂದಾಗಬೇಕಿದೆ. ಶ್ರೀಮಠ ಭಕ್ತಿ ಮಹಾಮನೆಯಾಗಿದ್ದು, ಉತ್ತಮ ಸಂಸ್ಕಾರ, ಶಿಕ್ಷಣ, ದಾಸೋಹ ತತ್ವ ಹೇಳಿಕೊಡುತ್ತದೆ. ಶ್ರೀ ಚನ್ನಬಸವ ಶಿವಯೋಗಿಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಮಳೆ, ಬೆಳೆ ಸಮೃದ್ಧಿಯಿಂದ ಬದುಕಿ ಹಸನಾಗಲಿ.
| ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಪೀಠಾಧಿಪತಿ, ಚಿಂಚೋಳಿ, ಹಾರಕೂಡ