

ಹಾಸನ: ರಾಜಾರೋಷವಾಗಿ ಅನಾಮಿಕರು ಸಂಸತ್ ಭವನದ ಒಳಗೆ ಪ್ರವೇಶ ಪಡೆದು ದಾಳಿ ಮಾಡಿದ್ದರೆ ಅಂದರೆ ಭದ್ರತಾ ವ್ಯವಸ್ಥೆ ಎಷ್ಟರ ಮಟ್ಟಿಗೆ ಕಲ್ಪಿಸಲಾಗಿದೆ ಊಹಿಸಿಕೊಳ್ಳಿ. ಈ ಅವಘಡಕ್ಕೆ ಗೃಹ ಸಚಿವರ ನಿರ್ಲಕ್ಷ್ಯವೇ ಕಾರಣ ಎಂದು ವಕೀಲ, ಜಿಲ್ಲಾ ಕಾಂಗ್ರೆಸ್ ವಕ್ತಾರ ದೇವರಾಜೇಗೌಡ ಆರೋಪಿಸಿದರು.
ಸಂಸದ ಪ್ರತಾಪ್ ಸಿಂಹ ಪಾಸ್ ಕೊಟ್ಟಿದ್ದರೆ ಅವರನ್ನೂ ಅರೋಪಿಯನ್ನಾಗಿ ಮಾಡಬೇಕು. ಪ್ರತಾಪ್ ಸಿಂಹ ಈ ರೀತಿಯ ಸಂಚು ರೂಪಿಸಿ ಚುನಾವಣೆಯಲ್ಲಿ ಲಾಭ ಪಡೆಯಲು ಯತ್ನಿಸಿದ್ದಾರೆ ಎಂಬ ಸಂಶಯವಿದೆ ಮೂಡುತ್ತಿದೆ. ಪ್ರತಾಪ್ ಸಿಂಹ ಕೂಡಲೇ ರಾಜೀನಾಮೆ ನೀಡಬೇಕು ಮತ್ತು ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರತಾಪ ಸಿಂಹ ಸ್ಥಾನದಲ್ಲಿ ಕಾಂಗ್ರೆಸ್ ಸಂಸದರು ಇದ್ದಿದ್ದರೆ ಯಾವ ಮಟ್ಟದ ಗಲಭೆ ಸೃಷ್ಟಿಸುತ್ತಿದ್ದರು ಎಂಬುದನ್ನು ಊಹಿಸಲು ಅಸಾಧ್ಯ. ಸಂಸದರ ವಿರುದ್ಧ ಬಿಜೆಪಿ ನಾಯಕರು ಏನು ಕ್ರಮ ತೆಗೆದುಕೊಳ್ಳುತ್ತಾರೆ. ಬಿಜೆಪಿಯವರಿಗೆ ನ್ಯಾಯ, ನೀತಿ ಮೇಲೆ ನಂಬಿಕೆ ಇದ್ದರೆ ಕೂಡಲೇ ಪ್ರತಾತ್ ಸಿಂಹ ರಾಜೀನಾಮೆ ಪಡೆಯಬೇಕು. ಘಟನೆ ಕುರಿತು ಗಲಾಟೆ ಮಾಡಿದರೆಂದು ಕಾಂಗ್ರೆಸ್‌ನ 15 ಸಂಸದರನ್ನು ಅನರ್ಹಗೊಳಿಸಲಾಗಿದೆ. ಈ ಶಿಕ್ಷೆಯನ್ನು ಮೊದಲು ಪ್ರತಾಪ್ ಸಿಂಹಗೆ ನೀಡಬೇಕು ಎಂದು ಹೇಳಿದರು.
ಸಾಮಾನ್ಯ ರೈತನಿಗೆ ಗೌರವ ಕೊಡದ ಪಕ್ಷ ಜೆಡಿಎಸ್. ಅಸಹಾಯಕನಾದ ರೈತನೊಬ್ಬನಿಗೆ ಭವಾನಿ ಅವರು ತೀರಾ ಅಸಂಬದ್ಧವಾಗಿ ಮಾತನಾಡಿದ್ದಾರೆ. ಈ ದರ್ಪ ಹೆಚ್ಚು ದಿನ ನಡೆಯಲ್ಲ. ತಮ್ಮ ಪಕ್ಷದ ಹೆಸರಿನ ಕೊನೆಯಲ್ಲಿರುವ ಎಸ್ ಪದವನ್ನು ತೆಗೆದು ಬಿ ಪದ ಸೇರಿಸಿಕೊಳ್ಳಬೇಕು. ಆ ವ್ಯಕ್ತಿಯ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತದೆ. ಎರಡೂ ವಾಹನಗಳು ಸ್ಥಳದಲ್ಲೇ ಇದ್ದರೂ ಬೈಕ್ ಮಾತ್ರ ಸೀಜ್ ಮಾಡಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಗಿರೀಶ್, ಯೊಗೇಶ್, ದೇವರಾಜ, ಚಂದ್ರಶೇಖರ ಇದ್ದರು.