ಮೊದಲು ನಿಮ್ಮ ಯೋಗ್ಯತೆ ಅರಿತುಕೊಳ್ಳಿ

12 mlv 1
ಶಾಸಕ ನರೇಂದ್ರಸ್ವಾಮಿ ವಿರುದ್ಧ ಮಳವಳ್ಳಿ ಪಟ್ಟಣದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು. ಡಿ.ಜಯರಾಮು, ರವಿ, ವಿಶ್ವನಾಥ್, ಪ್ರಭು ಇತರರು ಇದ್ದರು.
Published on

ಮಳವಳ್ಳಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನದಿಂದ ವಜಾ ಮಾಡಿದ್ದಾಗ ಅನರ್ಹತೆ ರದ್ದತಿಗೆ ಸಹಕರಿಸುವಂತೆ ಕುಮಾರಸ್ವಾಮಿ ಅವರನ್ನು ಬೇಡಿಕೊಂಡಿದ್ದ ನೀವು, ಸದನದಲ್ಲಿ ಸಿಎಂ ಆಗಲು ಯೋಗ್ಯತೆ ಇಲ್ಲದವರು ಎಂದು ನಿಂದನೆ ಮಾಡಿರುವ ನಿಮ್ಮ ಯೋಗ್ಯತೆ ಏನೆಂಬುದನ್ನು ಮೊದಲು ಅರಿತುಕೊಳ್ಳಿ ಎಂದು ಶಾಸಕ ನರೇಂದ್ರಸ್ವಾಮಿ ವಿರುದ್ಧ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಾಗ್ದಾಳಿ ನಡೆಸಿದರು.

ಪಟ್ಟಣದ ಅನಂತ್ ರಾಮ್ ವೃತ್ತದಲ್ಲಿ ಬುಧವಾರ ಜೆಡಿಎಸ್ ತಾಲೂಕು ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಮುಖ್ಯಮಂತ್ರಿಯಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟಿರುವ ಕುಮಾರಸ್ವಾಮಿ ಅವರನ್ನು ನಿಂದಿಸಿರುವುದು ದುರಹಂಕಾರವನ್ನು ತೋರಿಸುತ್ತದೆ ಎಂದು ಖಂಡಿಸಿದರು.

ಕಾಂಗ್ರೆಸ್‌ನ ಕಟ್ಟಾಳು ಎಂಬಂತೆ ಮಾತನಾಡುವ ನೀವು, ಜಿಲ್ಲೆಯಲ್ಲಿ ಜಿಪಂ ಮತ್ತು ಸಂಸದ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಕೆಲಸ ಮಾಡಿರುವುದನ್ನು ಮರೆತು ಬಿಟ್ಟಿದ್ದೀರಾ?. ಕುಮಾರಸ್ವಾಮಿ ಅವರ ಬಗ್ಗೆ ಮಾತಾನಾಡಿರುವ ಬಗ್ಗೆ ಸದನದಲ್ಲೇ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್ ಹಿಂದುಳಿದ ಅಧ್ಯಕ್ಷ ಡಿ.ಜಯರಾಮು, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ವಿಶ್ವನಾಥ್, ಟೌನ್ ಅಧ್ಯಕ್ಷ ಪ್ರಭು, ಪುರಸಭೆ ಸದಸ್ಯರಾದ ನಂದಕುಮಾರ್, ಸಿದ್ದರಾಜು, ಜಿಪಂ ಮಾಜಿ ಸದಸ್ಯರಾದ ಹನುಮಂತು, ಚೊಟ್ಟನಹಳ್ಳಿ ಸತೀಶ್, ಮುಖಂಡರಾದ ಕಾಂತರಾಜು, ಚಂದಹಳ್ಳಿ ಶ್ರೀಧರ್, ಸಿದ್ದಾಚಾರಿ, ಸದಾನಂದ, ಕಂಬರಾಜು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net