ಮೊದಲು ಜೀವ, ನಂತರ ಜೀವನ

21RAM-1-Web
ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದ ವಾಸವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಮಲ್ಲನಗೌಡ ಪಾಟೀಲ, ಜಯಶ್ರೀ ಬೆಳಗಂಟಿ, ಮುರಳೀಧರ ದೇಶಪಾಂಡೆ ಇತರರು ಉಪಸ್ಥಿತರಿದ್ದರು.
Published on

ರಾಮದುರ್ಗ: ಸುರಕ್ಷಿತವಾಗಿದ್ದು ಜೀವ ಉಳಿಸಿಕೊಂಡಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯವಿದೆ. ಕ್ಷಣಿಕ ಕೆಲಸಕ್ಕೆ ನಾಗರಿಕರು ಅನವಶ್ಯಕವಾಗಿ ಅಲೆದಾಡುವುದನ್ನು ಬಿಡಬೇಕು. ಮನೆಯಲ್ಲಿ ಉಳಿದುಕೊಂಡು ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

ತಾಲೂಕಿನ ಹುಲಿಗೊಪ್ಪ, ಗೊಣ್ಣಾಗರ, ಮನಿಹಾಳ, ಸುರೇಬಾನ ಗ್ರಾಮಗಳಲ್ಲಿ ತಾಲೂಕಾಡಳಿತದೊಂದಿಗೆ ಭೇಟಿ ನೀಡಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಸೋಂಕಿತರು ಮನೆಯಲ್ಲಿ ಉಳಿದುಕೊಳ್ಳದೇ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಗುಣಮಟ್ಟದ ಊಟ, ಸೌಲಭ್ಯಗಳೊಂದಿಗೆ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ಜಿಲ್ಲಾದ್ಯಂತ ಶನಿವಾರದಿಂದ ಮೂರು ದಿನ ವೈದ್ಯಕೀಯ ಸೇವೆ ಹೊರತು ಪಡಿಸಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಮನೆಯಿಂದ ಯಾರೂ ಹೊರಗಡೆ ಬರಬಾರದು ಎಂದರು.

ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಕಾರಣ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಎಲ್ಲರೂ ಈ ಕುರಿತು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಮನಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಸುರೇಬಾನ ಗ್ರಾಪಂ ಅಧ್ಯಕ್ಷೆ ಜಯಶ್ರೀ ಬೆಳಗಂಟಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಸಿಡಿಪಿಒ ಸಿಂಗಾರೆವ್ವ ವಂಟಮೂರಿ, ಟಿಎಚ್‌ಒ ಡಾ.ಮೃತ್ಯುಂಜಯ ತಹಡಾಳ, ಡಾ.ವೆಂಕಟೇಶ ಕಿಲಬನೂರ,
ಪಿಎಸ್‌ಐ ಎಸ್.ಎಂ.ಕಾರಜೋಳ ಪಿಡಿಒಗಳಾದ ಬಿ.ಎಸ್.ಗುಡದಣ್ಣವರ, ಬಸವರಾಜ ಹಾವಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net