

ಧಾರವಾಡ: ಜಿಲ್ಲೆಯ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕುಗಳ 65 ಗ್ರಾ.ಪಂ.ಗಳಿಗೆ ಮಂಗಳವಾರ ಮೊದಲ ಹಂತದ ಚುನಾವಣೆ ಜರುಗಲಿದೆ. ಎಲ್ಲೆಡೆ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿರುವ ಧಾರವಾಡ ತಾಲೂಕಿನ ಗ್ರಾ.ಪಂ. ಚುನಾವಣೆಯ ಮಸ್ಟರಿಂಗ್ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ಧಾರವಾಡ ತಾಲೂಕಿನ 34, ಅಳ್ನಾವರ ತಾಲೂಕಿನ 4 ಮತ್ತು ಕಲಘಟಗಿ ತಾಲೂಕಿನ 27 ಸೇರಿ 65 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯುತ್ತಿದೆ. ಧಾರವಾಡ ತಾಲೂಕಿನಲ್ಲಿ 238, ಅಳ್ನಾವರ ತಾಲೂಕಿನಲ್ಲಿ 21, ಕಲಘಟಗಿ ತಾಲೂಕಿನಲ್ಲಿ 153 ಸೇರಿ 412 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಜರುಗಲಿದೆ ಎಂದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಸಾಮಾನ್ಯ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗೂ ಒಬ್ಬ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಧಾರವಾಡ ತಾಲೂಕಿಗೆ 262 ಪಿಆರ್ಒ, 262 ಎಪಿಆರ್ಒ, 524 ಪೋಲಿಂಗ್ ಅಧಿಕಾರಿ, ಅಳ್ನಾವರ ತಾಲೂಕಿಗೆ 23 ಪಿಆರ್ಒ, 23 ಎಪಿಆರ್ಒ, 46 ಪೋಲಿಂಗ್ ಅಧಿಕಾರಿ, ಕಲಘಟಗಿ ತಾಲೂಕಿಗೆ 172 ಪಿಆರ್ಒ, 172 ಎಪಿಆರ್ಒ, 344 ಪೋಲಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ ಉಪಸ್ಥಿತರಿದ್ದರು.
ಮತಗಟ್ಟೆಗಳತ್ತ ಸಿಬ್ಬಂದಿ: ಧಾರವಾಡ ತಾಲೂಕಿನ 34 ಗ್ರಾ.ಪಂ.ಗಳಿಗೆ ನಿಯೋಜನೆಗೊಂಡಿರುವ ಮತಗಟ್ಟೆ ಸಿಬ್ಬಂದಿ ಸೋಮವಾರ ಮಧ್ಯಾಹ್ನದಿಂದಲೇ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಮತದಾನ ಸಾಮಗ್ರಿ, ಮತಪೆಟ್ಟಿಗೆ, ಸ್ಯಾನಿಟೈಸರ್, ಕೋವಿಡ್ ತಪಾಸಣಾ ಸಾಮಗ್ರಿಗಳನ್ನು ನೀಡಲಾಯಿತು. ವಿವಿಧ ಮತಗಟ್ಟೆಗಳಿಗೆ ಅನುಗುಣವಾಗಿ ಮಾರ್ಗ ಸಿದ್ಧಪಡಿಸಲಾಗಿದ್ದು, ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಚುನಾವಣಾ ಸಿಬ್ಬಂದಿಯನ್ನು ಕಳುಹಿಸಲಾಯಿತು. ನಿಯೋಜಿತ ಸಿಬ್ಬಂದಿಗೆ ಆಯಾ ಮತಗಟ್ಟೆಗಳಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ವಸತಿಯ ವ್ಯವಸ್ಥೆ ಮಾಡಲಾಗಿದೆ.
ಸಂತೆ ರದ್ದು: ಅಳ್ನಾವರ ತಾಲೂಕಿನ ಹೊನ್ನಾಪುರ, ಕಲಘಟಗಿ ತಾಲೂಕಿನ ಗಂಭ್ಯಾಪುರ ಹಾಗೂ ಶೀಗಿಗಟ್ಟಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಸಂತೆಗಳನ್ನು ಮತದಾನದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಡಿ. 20ರ ಸಂಜೆ 5ರಿಂದ ನಿಷೇಧಾಜ್ಞೆ ಜಾರಿಯಲ್ಲಿದ್ದು, 22ರ ಸಂಜೆ 5 ರವರೆಗೆ ಮುಂದುವರಿಯಲಿದೆ. ಮತದಾನದ ದಿನದಂದು ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ವಾಹನದಲ್ಲಿ ಕರೆತರುವುದು, ಅಲ್ಲಿಂದ ಕರೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು, ಸಂಚರಿಸುವುದು ನಿಷಿದ್ಧ. ಮತಗಟ್ಟೆಗಳ ಸುತ್ತಲಿನ 200 ಮೀ. ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಖಾಸಗಿ ವಾಹನಗಳ ನಿಲುಗಡೆ, ಧ್ವನಿವರ್ಧಕ ಬಳಸುವಂತಿಲ್ಲ. ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಅಭ್ಯರ್ಥಿ ಪರ ಪ್ರಚಾರ, ಮತದಾರರ ಓಲೈಕೆ ಮಾಡುವಂತಿಲ್ಲ ಎಂದು ತಿಳಿಸಿದರು.