ಮೊದಲ ಹಂತ ಶಾಂತಿಯ ಮಂತ್ರ

GP Election-1
Election
Published on

ಬೀದರ್: ಜಿಲ್ಲೆಯ ಬಸವಕಲ್ಯಾಣ, ಹುಲಸೂರು, ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ತಾಲೂಕಿನ 106 ಗ್ರಾಮ ಪಂಚಾಯಿತಿಗಳ 1740 ಸ್ಥಾನಗಳಿಗೆ ಮಂಗಳವಾರ (ಮೊದಲ ಹಂತದಲ್ಲಿ) ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ. ಶೇ.74.40ರಷ್ಟು ಮತದಾನವಾಗಿದೆ.

ರಾಜ್ಯದಲ್ಲೇ ಜಿಲ್ಲೆಯಲ್ಲಿ ಮಾತ್ರ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಲಾಗುತ್ತಿದೆ. ಕೆಲವು ಕಡೆ ಆರಂಭಿಕವಾಗಿ ಮತಯಂತ್ರ ಸಮರ್ಪಕ ಕೆಲಸ ಮಾಡದಿರುವುದು, ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಇತರೆ ಕಾರಣಕ್ಕೆ ಸಣ್ಣಪುಟ್ಟ ಗೊಂದಲ ಏರ್ಪಟ್ಟಿದ್ದವು. ಆದರೆ ನಂತರ ಅಧಿಕಾರಿಗಳು ಎಲ್ಲವೂ ಸರಿಪಡಿಸಿ ಸುಗಮ ಮತದಾನಕ್ಕೆ ಅನುವು ಮಾಡಿಕೊಟ್ಟರು. ಎಲ್ಲೂ ಮತದಾನ ಸ್ಥಗಿತ, ವಾಗ್ವಾದ, ಹೊಡಿಬಡಿಯಂಥ ಅಹಿತಕರ ಘಟನೆಗಳು ನಡೆದಿಲ್ಲ. ಮೊದಲ ಹಂತದ ಕಣದಲ್ಲಿರುವ 5286 ಅಭ್ಯರ್ಥಿಗಳ ಭವಿಷ್ಯ ಮತದಾರರು ಮತಯಂತ್ರದಲ್ಲಿ ಬಂದ್ ಮಾಡಿದ್ದಾರೆ.

ಬೆಳಗ್ಗೆ 7ಕ್ಕೆ ಮತದಾನ ಆರಂಭವಾಯಿತು. ಆದರೆ ತೀವ್ರ ಚಳಿಯ ಹಿನ್ನೆಲೆಯಲ್ಲಿ ಆರಂಭದಲ್ಲಿ ಮತದಾರರು ಮತಗಟ್ಟೆಗಳತ್ತ ಸುಳಿಯಲಿಲ್ಲ. ಹೀಗಾಗಿ ಬೆಳಗ್ಗೆ 9ರವರೆಗೆ ಹೆಚ್ಚಿನ ಮತಗಟ್ಟೆಗಳಲ್ಲಿ ಭಣಭಣ ವಾತಾವರಣವಿತ್ತು. ಈ ಅವಧಿಯಲ್ಲಿ ಸರಾಸರಿ ಶೇ.6ರಷ್ಟು ಮಾತ್ರ ಮತದಾನವಾಗಿತ್ತು. 10ರ ನಂತರ ಮತಗಟ್ಟೆಗಳಲ್ಲಿ ಸಾಲುಗಳು ಕಂಡುಬಂದವು. ಮಧ್ಯಾಹ್ನ 12 ರಿಂದ 3ರವರೆಗೆ ಹೆಚ್ಚಿನ ಮತದಾರರು ಮತಗಟ್ಟೆಗೆ ಆಗಮಿಸಿದ್ದರು. ಹೀಗಾಗಿ ಈ ಮೂರು ಗಂಟೆಯಲ್ಲೇ ಅತ್ಯಧಿಕ ಶೇ.45ರಷ್ಟು ಮತದಾನ ನಡೆಯಿತು. ಸಂಜೆ ಕೆಲ ಕೇಂದ್ರಕ್ಕೆ ಹೆಚ್ಚಿನ ಮತದಾರರು ಬಂದಿದ್ದರು. 5ರೊಳಗೆ ಕೇಂದ್ರದೊಳಗೆ ಬಂದವರಿಗೆ ಮತದಾನದ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಕೆಲವು ಕಡೆ ರಾತ್ರಿ 8ರವರೆಗೂ ಮತದಾನ ನಡೆದಿದೆ.

ಬಹುತೇಕ ಗ್ರಾಮಗಳ ಮತಗಟ್ಟೆ ಎದುರು ಜನಜಾತ್ರೆ ಸೇರಿತ್ತು. ಅಭ್ಯರ್ಥಿ ಮತ್ತವರ ಬೆಂಬಲಿಗರು ಅಲ್ಲಲ್ಲಿ ಜಮಾಯಿಸಿ ಕೊನೆಯ ಹಂತದವರೆಗೂ ಮತದಾರರ ಮನವೊಲಿಸುವ ಕಸರತ್ತು ನಡೆಸಿದರು. ಗ್ರಾಮದ ವಿವಿಧ ಬಡಾವಣೆಗಳಿಂದ ಜನರಿಗೆ ಕರೆ ತರುವುದಕ್ಕಾಗಿ ಹಲವರು ವಾಹನಗಳ ವ್ಯವಸ್ಥೆಯೂ ಮಾಡಿದ್ದರು. ಬೇರೆಡೆ ವಲಸೆ ಹೋಗಿದ್ದ ಮತದಾರರಿಗೆ ಅಭ್ಯರ್ಥಿಗಳು ತಮ್ಮ ಖರ್ಚಿನಲ್ಲೇ ಕರೆಸಿದ್ದು ವಿಶೇಷವಾಗಿತ್ತು. ಅಲ್ಲಲ್ಲಿ ಶಾಮಿಯಾನಗಳನ್ನು ಹಾಕಲಾಗಿತ್ತು.
ಮತದಾರರು ಮತಗಟ್ಟೆಯೊಳಗೆ ಹೋಗುವವರೆಗೂ ಅಭ್ಯರ್ಥಿಗಳು ಅವರ ಬೆನ್ನು ಬಿದ್ದು, ನನಗೇ ಮತ ಹಾಕಿ. ನನ್ನ ಚಿಹ್ನೆ ಇದು ಇದೆ ನೋಡಿ' ಎಂದು ಹೇಳುತ್ತ ಮತ ಭಿಕ್ಷೆ ಕೇಳುತ್ತಿರುವುದು ಸಾಮಾನ್ಯವಾಗಿತ್ತು. ಒಂದೊಂದೂ ಮತಕ್ಕೂ ಲೆಕ್ಕ ಹಾಕಿದ ಅಭ್ಯರ್ಥಿಗಳು ತೆರೆಮರೆಯಲ್ಲೇ ಕೊನೇ ಘಳಿಗೆಯ ಆಸೆ, ಆಮೀಷವೊಡ್ಡುವ ಪ್ರಯತ್ನವನ್ನು ಸಹ ನಡೆಸಿದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ರೋಗಿಗಳು, ಅಂಗವಿಕಲರು, ಹಿರಿಯ ಜೀವಿಗಳಿಗೂ ಬಿಡದಂತೆ ಕರೆತಂದಿರುವುದು ವಿಶೇಷ ಎನಿಸಿತು.

ಜಿಲ್ಲಾಧಿಕಾರಿ ರಾಮಚಂದ್ರನ್, ಎಸ್ಪಿ ನಾಗೇಶ ಅವರು ಸ್ವತಃ ವಿವಿಧೆಡೆ ಸುತ್ತಾಡಿ ಸ್ಥಿತಿಗತಿ ಅವಲೋನ ನಡೆಸುವ ಜತೆಗೆ ಯಾವುದೇ ಸಮಸ್ಯೆ ಆಗದಂತೆ ಮೇಲುಸ್ತುವಾರಿ ನೋಡಿಕೊಂಡರು. ಮತಗಟ್ಟೆಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೊಬೈಲ್ ವಾಹನಗಳೊಂದಿಗೆ ಪೊಲೀಸ್ ಅಧಿಕಾರಿ ಸಂಚರಿಸಿ ತಮಗೊಪ್ಪಿಸಿದ ಕ್ಷೇತ್ರಗಳಲ್ಲಿ ನಿಗಾ ಇರಿಸಿದ್ದರು. ಅಲ್ಲಲ್ಲಿ ಡಿಆರ್, ಕೆಎಸ್ಆರ್ ಪಿಯ ವ್ಯಾನ್ ಸಹ ಸನ್ನದ್ಧವಾಗಿಡಲಾಗಿತ್ತು.

ಫಲ ಕೊಟ್ಟ ಡಿಸಿ, ಎಸ್ಪಿ ಪ್ಲ್ಯಾನ್
ಗ್ರಾಪಂ ಚುನಾವಣೆ ಶಾಂತಿಯುತವಾಗಿ ನಡೆಸುವುದು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ತಲೆನೋವಿನ ಸಂಗತಿ. ಊರೂರಿನ ಸ್ಥಳೀಯ ಸಮಸ್ಯೆ ಚುನಾವಣೆ ಹೊತ್ತಿನಲ್ಲೇ ಭುಗಿಲೆದ್ದು, ಕಿರಿಕ್ ಗೆ ಕಾರಣವಾಗುವ ಜತೆಗೆ ಹಳೇ ವೈಷಮ, ದ್ವೇಷ ಹೊಗೆಯಾಡುವಿಕೆ ಸಾಮಾನ್ಯ. ಇದನ್ನು ಸವಾಲಾಗಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ರಾಮಚಂದ್ರನ್ ಹಾಗೂ ಎಸ್ಪಿ ನಾಗೇಶ ಅವರು ಸಮರ್ಪಕ ಕಾರ್ಯತಂತ್ರ ರೂಪಿಸಿ ಎಲ್ಲೆಡೆ ಈ ಪ್ರಕ್ರಿಯೆ ಅತ್ಯಂತ ಶಾಂತವಾಗಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೆರಡು ವಾರಗಳಿಂದ ಇಬ್ಬರೂ ಸರಣಿ ಸಭೆ ನಡೆಸಿದ್ದರು. ಯಾವುದೇ ಗೊಂದಲ, ಗದ್ದಲಕ್ಕೆ ಆಸ್ಪದ ನೀಡದಂತೆ ಚುನಾವಣೆ ಪ್ರಕ್ರಿಯೆ ಹೇಗೆ ನಡೆಸಬೇಕೆಂಬ ಬಗ್ಗೆ ಅಧೀನ ಅಧಿಕಾರಿ, ಸಿಬ್ಬಂದಿಗಳಿಗೆ ವಿವಿಧ ಸಲಹೆ, ಸೂಚನೆ ನೀಡಿದ್ದರು. ಸ್ವತಃ ವಿವಿಧೆಡೆ ಸುತ್ತಾಡಿ ಸ್ಥಿತಿಗತಿಯನ್ನು ಅವಲೋಕಿಸಿ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದರು. ಸಮಸ್ಯೆ ಆಗಬಹುದಾದ ಗ್ರಾಪಂಗಳ ಮಾಹಿತಿ ಕಲೆ ಹಾಕಿ, ಅಲ್ಲಿ ಹೆಚ್ಚಿನ ನಜರ್ ಇಟ್ಟಿದ್ದರು. ಇದೆಲ್ಲದರ ಫಲವಾಗಿ ಮೊದಲ ಹಂತದ ಎಲ್ಲ 744 ಮತಗಟ್ಟೆಗಳಲ್ಲಿ ಯಾವುದೇ ಸಣ್ಣಪುಟ್ಟ ಕಿರಿಕಿರಿ ಸಹ ಇಲ್ಲದಂತೆ ಶಾಂತಿಯುತ ಮತದಾನ ನಡೆದಿದೆ. ಇದೇ ಮೊದಲ ಬಾರಿ ಗ್ರಾಪಂ ಚುನಾವಣೆ ಇಷ್ಟೊಂದು ಸುಗಮ ನಡೆದಿರುವುದು ವಿಶೇಷ. ಅನೇಕರು ಡಿಸಿ, ಎಸ್ಪಿ ಪ್ಲ್ಯಾನ್ ಗೆ ಭೇಷ್ ಎಂದಿದ್ದು, ಡಿ. 27ರಂದು ಎರಡನೇ ಹಂತದ ಮತದಾನವೂ ಇದೇ ರೀತಿ ಮುಗಿಸುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರ, ಪಟ್ಟಣಗಳು ಭಣಭಣ
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಜನಜಾತ್ರೆ ಕಂಡುಬಂದರೆ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಭಣಭಣ ವಾತಾವರಣವಿತ್ತು. ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಹಾಗೂ ಹುಲಸೂರು ಪಟ್ಟಣಗಳಲ್ಲಿ ವ್ಯಾಪಾರದ ಭರಾಟೆ ಇರಲಿಲ್ಲ. ಬಸ್ ನಿಲ್ದಾಣಗಳು ಸಹ ಬಿಕೋ ಎನ್ನುತ್ತಿದ್ದವು. ಹಲವು ಬಸ್ಗಳು ಚುನಾವಣೆಗೆ ಬಳಸಿಕೊಂಡಿದ್ದರಿಂದ ಪ್ರಯಾಣಿಕರು ಸಹ ಪರದಾಡಿದರು. ಆಗೊಂದು, ಈಗೊಂದು ಬಸ್ ಗಳು ಬರುತ್ತಿದ್ದವು. ಖಾಸಗಿ ವಾಹನ, ಜೀಪ್ ಹಾಗೂ ಮ್ಯಾಕ್ಸಿಕ್ಯಾಬ್ ಗಳಿಗೆ ಭಾರೀ ಬೇಡಿಕೆಯಿತ್ತು. ಚುನಾವಣೆ ಹಿನ್ನಲೆಯಲ್ಲಿ ಎಲ್ಲರೂ ತಮ್ಮ ದೈನಂದಿನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ತಮ್ಮ ಅಭ್ಯರ್ಥಿಗಳ ಪರವಾಗಿ ಗ್ರಾಮೀಣ ಭಾಗದಲ್ಲಿ ಬ್ಯಾಟಿಂಗ್ ಮಾಡಿರುವುದು ಕಂಡುಬಂತು. ರಸ್ತೆಯಲ್ಲೂ ಅಷ್ಟೊಂದು ಜನಸಂದಣಿ ಇರಲಿಲ್ಲ. ಮತಗಟ್ಟೆ ಸುತ್ತಮುತ್ತ ನೂರಾರು ಮಂದಿ ಸೇರಿದ್ದರು. ಊರಿನಿಂದ ಬೇರೆ ನಗರಕ್ಕೆ ವಲಸೆ ಹೋಗಿದ್ದ ಕುಟುಂಬಗಳ ಹಲವರಿಗೆ ಚುನಾವಣೆಯು ಸ್ವಗ್ರಾಮಕ್ಕೆ ಬರುವಂತೆ ಮಾಡಿತು.

ವಿವಿಧ ಮತಗಟ್ಟೆಗಳಿಗೆ ಭೇಟಿ
ಡಿಸಿ ರಾಮಚಂದ್ರನ್, ಎಸ್ಪಿ ನಾಗೇಶ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ (ಕೆ) ಗ್ರಾಮದ ಮತಗಟ್ಟೆ ಸಂಖ್ಯೆ 84, 85, 85/ಎ, ಖಟಕಚಿಂಚೋಳಿ ಗ್ರಾಮದ ಮತಗಟ್ಟೆ 68ಎ, 67ಎ, ಕರಡ್ಯಾಳ ಮತಗಟ್ಟೆ 112 113., ಹುಮನಾಬಾದ್ ತಾಲೂಕಿನ ಸಿಂದಬಂದಗಿ ಮತಗಟ್ಟೆ ಸಂಖ್ಯೆ 14, 15, ನಂದಗಾಂವ , ಚಿಟಗುಪ್ಪ ತಾಲೂಕಿನ ಮಂಗಲಗಿಯ 69, 70, 71, ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಮತಗಟ್ಟೆ 42, ಹಣಮಂತವಾಡಿ ಮತಗಟ್ಟೆ 214, 215 ಮತ್ತು ಹುಲಸೂರ ತಾಲೂಕಿನ ಬೇಲೂರಾ ಗ್ರಾಮದ ಮತಗಟ್ಟೆಗೆ ಭೇಟಿ ನೀಡಿದ್ದರು. ಮತ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸಿದ್ದ ಮತದಾರರಿಗೆ ಡಿಸಿ ತಿಳಿಸಿದರು. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಪಾಲನೆ ಮಾಡಲು, ಮಾಸ್ಕ್ ಧರಿಸಬೇಕೆಂದು ಸಲಹೆ ಮಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆಗಳಲ್ಲಿ ಪೊಲೀಸ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರ ಅಗತ್ಯ ಸಿಬ್ಬಂದಿಗೆ ನೇಮಿಸಿ ಪರಸ್ಪರ ಅಂತರ ಪಾಲನೆ, ಸ್ಯಾನಿಟೈಜರ್ ಬಳಕೆ, ಸೂಕ್ತ ಬಂದೋಬಸ್ತ್ ಸೇರಿದಂತೆ ಇತರ ವ್ಯವಸ್ಥೆ ಮಾಡಿರುವುದನ್ನು ಡಿಸಿ, ಎಸ್ಪಿ ಗಮನಿಸಿದರು.

ಮತ ಹಾಕಿ ಪ್ರಾಣ ಬಿಟ್ಟ!
ಚಿಟಗುಪ್ಪ: ತಾಲೂಕಿನ ಕರಕನಳ್ಳಿ ಗ್ರಾಮದಲ್ಲಿ ಮತ ಚಲಾವಣೆ ಮಾಡಿದ ನಂತರ ವೃದ್ಧರೊಬ್ಬರು ಪ್ರಾಣ ಬಿಟ್ಟಿರುವ ಪ್ರಸಂಗ ಮಂಗಳವಾರ ನಡೆದಿದೆ. ಗ್ರಾಮದ ಚಾಂದ್ ಪಾಶಾ (85) ಎನ್ನುವರು ಮತದಾನ ಮಾಡಿದ ನಂತರ ಮನೆಗೆ ಬಂದಿದ್ದಾರೆ. ಮನೆಯ ಒಳಗಡೆ ಬರುತ್ತಲೇ ದಿಢೀರ್ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net