

ಗದಗ: ಜ.31ರಿಂದ ಫೆ.3ರ ವರೆಗೆ ಜಿಲ್ಲೆಯಾದ್ಯಂತ ಮೊದಲನೇ ಸುತ್ತಿನ ಪಲ್ಸ್ ಪೋಲಿಯೋಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಜ.31ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕಾ ವಿತರಣೆ ನಡೆಯಲಿದೆ. ನಂತರ ಫೆ.1 ರಿಂದ ಫೆ.3ರವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ. ನವಜಾತ ಶಿಶುವಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮರೆಯದೆ ಪೊಲೀಯೋ ಹನಿ ಹಾಕಿಸಬೇಕು ಎಂದರು.
ಸಿಬ್ಬಂದಿ ಸೇರಿ ಸಾರ್ವಜನಿಕರೆಲ್ಲರೂ ಕೋವಿಡ್ ಮಾರ್ಗಸೂಚಿ ಪಾಲಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ.ಕೆ. ಮಾತನಾಡಿ, ಅಭಿಯಾನದಲ್ಲಿ ವಲಸೆ ಕಾರ್ವಿುಕರ ಮಕ್ಕಳು, ಸ್ಲಂ ಪ್ರದೇಶಗಳಲ್ಲಿನ ಮಕ್ಕಳಿಗೂ ಪೋಲಿಯೋ ಲಸಿಕೆ ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 1,30,666 ಮಕ್ಕಳಿದ್ದಾರೆ. ಅವರೆಲ್ಲರಿಗೂ ಅಂಗನವಾಡಿ, ಆಸ್ಪತ್ರೆ, ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಕಡೆ ಒಟ್ಟು 705 ಬೂತ್ಗಳನ್ನು ಮಾಡಲಾಗಿದೆ. 146 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, 27 ಟ್ರಾನ್ಸಿಟ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ ಎಂದರು. ಸುಗಮ ಲಸಿಕಾ ಕಾರ್ಯಕ್ಕಾಗಿ 10 ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ. ಲಸಿಕಾ ಅಭಿಯಾನದ ಯಶಸ್ಸಿಗಾಗಿ 50 ವಾಹನಗಳ ಅಗತ್ಯವಿದ್ದು, ಒಟ್ಟಾರೆ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಡಾ.ಮುಕುಂದ ಗಲಗಲಿ ಪೋಲಿಯೋ ಕಾರ್ಯಕ್ರಮದ ಹೊಸ ಮಾರ್ಗಸೂಚಿ ಬಗ್ಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಿ.ಎಸ್. ಪಲ್ಲೇದ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಡಾ. ಅರುಂಧತಿ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್.ಎ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಉಮೇಶ ಕರಮುಡಿ, ಪುಷ್ಪಾ ಪಾಟೀಲ, ರೂಪಸೇನ ಚವ್ಹಾಣ ಮತ್ತಿತರರು ಇದ್ದರು.