

ಹಾಸನ: ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಕೆ.ಎನ್.ರಾಜಣ್ಣ ಮೊದಲ ಬಾರಿಗೆ ಪ್ರಗತಿ ಪರಿಶೀಲನ ಸಭೆ ನಡೆಸಿ ಅಧಿಕಾರಿಗಳಿಗೆ ಚಳಿ ಬಿಡಿಸುವ ಮೂಲಕ ಮತ್ತೊಮ್ಮೆ ತಪ್ಪುಗಳು ಮರುಕಳಿಸಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ 2023-24ನೇ ಸಾಲಿನ ಮೊದಲ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳ ಅಶಿಸ್ತು ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬಂದವರು ಮತ್ತು ತಡವಾಗಿ ಬಂದಂತಹ ಅಧಿಕಾರಿಗಳ ವಿರುದ್ಧ ಸಚಿವರು ಕೆಂಡಮಂಡಲರಾದರು.
ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಮತ್ತು ತಡವಾಗಿ ಬಂದವರಿಗೆ, ನಾನು ಇದನ್ನೆಲ್ಲಾ ಸಹಿಸುವುದಿಲ್ಲ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾರ ಸಹಕಾರ ಬೇಕು. ನಾನು ಜಿಲ್ಲೆಗೆ ಏನಾದರೂ ಕಾಣಿಕೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಬಂದಿದ್ದಾನೆ. ನನಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾರೆ ಯಾವುದೇ ಸರ್ಕಾರವಿರಲಿ, ಯಾರೇ ಮಂತ್ರಿ ಇರಲಿ, ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಕೃಷಿ ಅಧಿಕಾರಿ ರಾಜಾ ಸುಲೋಚನಾ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಆದರೆ ಕಳೆದ ವಾರ ಬಂದಂತಹ ಮಳೆಯಿಂದ ಸ್ವಲ್ಪ ಚೇತರಿಕೆ ಆಗಿದೆ. ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಇದಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಎಚ್.ಕೆ. ಸುರೇಶ್ ಮಾತನಾಡಿ, ರೈತರಿಗೆ ಯೂರಿಯಾ ಗೊಬ್ಬರ ಸರಿಯಾಗಿ ಸಿಗುತ್ತಿಲ್ಲ ಇದನ್ನ ತೆಗೆದುಕೊಳ್ಳಬೇಕಾದರೆ ಪರ್ಯಾಯವಾಗಿ ಇನ್ನೊಂದು ಗೊಬ್ಬರ ತೆಗೆದುಕೊಳ್ಳಬೇಕು ಎಂಬ ಒತ್ತಡಗಳು ಬರುತ್ತವೆ ಇದರಿಂದ ರೈತರಿಗೆ ತೊಂದರೆ ಆಗುತ್ತದೆ. ಇದನ್ನ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಸಚಿವರು ಮಾತನಾಡಿ ರೈತರಿಗೆ ತೊಂದರೆ ಉಂಟಾಗದಂತೆ ನೀವು ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಆ ರೀತಿ ಏನಾದರೂ ಘಟನೆಗಳು ನಡೆಯುತ್ತಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಅವರ ಪರವಾನಿಗೆಯನ್ನು ರದ್ದುಗೊಳಿಸಿ ಎಂದು ನಿರ್ದೇಶನ ನೀಡಿದರು.
ಬೆಳೆ ವಿಮೆ ನೋಂದಣಿಗೆ ಸಾಕಷ್ಟು ಸಮಸ್ಯೆಯಾಗಿದ್ದು ಇನ್ನೂ ಹಲವರ ರೈತರು ನೋಂದಾವಣೆ ಮಾಡಿಸಿಕೊಂಡಿಲ್ಲ ರೈತರ ಹಿತ ದೃಷ್ಟಿಯಿಂದ ಮತ್ತೆ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು ಅಲ್ಲದೆ ಬೆಳೆ ವಿಮೆ ನೋಂದಣಿ ಅವಧಿ ಮುಗಿದ ನಂತರ ತಾಲೂಕಿನ ಅಂಕಿ ಅಂಶವನ್ನು ಒದಗಿಸುವಂತೆ ತಿಳಿಸಿದರು.
ಸಭೆಯಲ್ಲಿ ಪಶುವೈದ್ಯರ ಕೊರತೆ, ಖಾಸಗಿ ಹಾಲಿನ ಸಂಸ್ಥೆಗಳು ಹಾಲು ಸಂಗ್ರಹದಲ್ಲಿ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಎನ್ ಬಾಲಕೃಷ್ಣ ಒತ್ತಾಯಿಸಿದರು.ಇದಕ್ಕೆ ಉತ್ತರಿದ ಸಚಿವರು, ಕಲಬೆರೆಕೆ ತಡೆಯಲು ತಂಡ ರಚಿಸಿ ,ಸೂಕ್ತ ಪರೀಕ್ಷೆ ಮಾಡಿಸಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು.
ಗೃಹ ಲಕ್ಷ್ಮಿಯೋಜನೆ ಅನುಷ್ಠಾನ ಚುರುಕುಗೊಳಿಸುವಂತೆ ಹಾಗೂ ನೊಂದಣಿ ಮಾಡಲು ಹಣ ಪಡೆಯುವವರ ವಿರುದ್ದ ಕ್ರಮ ವಹಿಸಬೇಕು.ಅಧಿಕಾರಿಗಳು ಜನರಿಗೆ ಸುಲಭವಾಗಿ ಸಿಗುವಂತಿರ ಬೇಕು. ಕಚೇರಿಗಳಲ್ಲೂ ಲಭ್ಯವಾಗಬೇಕು ಕ್ಷೇತ್ರ ಭೇಟಿಗಳನ್ನು ಆಗಿಂದಾಗ್ಗೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಶಾಸಕರಾದ ಎ.ಮಂಜು ,ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು, ಕೆ.ಎಂ.ಶಿವಲಿಂಗೇಗೌಡ ಅವರು ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಪ್ರಸ್ತಾಪಿಸಿದರು.ಸಚಿವರು ಮಕ್ಕಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿ, ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಹೊಸ ಕಾಮಗಾರಿ ಯಾವುದು ತೆಗೆದುಕೊಳ್ಳಬೇಡಿ ಟೆಂಡರ್ ಆಗಿರುವ ಕಾಮಗಾರಿ ಮುಂದುವರೆದ ಕಾಮಗಾರಿ ಮುಕ್ತಾಯಗೊಳಿಸಿ ಹಾಗೂ ಯಗಚಿ, ಎತ್ತಿನ ಹೊಳೆ ಹಾಗೂ ರಣಘಟ್ಟ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ಶಾಸಕರರು ತಿಳಿಸಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರಲ್ಲದೆ, ತಾವೂ ಸಹ ಭೇಟಿ ನೀಡಿ ಮಾಡುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಮರಳು ದಂದೆ ನಡೆಯುತ್ತಿದೆ ಅದರೆ ಸ್ಥಳೀಯ ಬಡವರಿಗೆ ತೊಂದರೆ ಕೊಡಲಾಗುತ್ತಿದೆ.ಯಾವುದೋ ಸಂಸ್ಥೆಗಳ ಹೆಸರಿನಲ್ಲಿ ಕಲ್ಲು ಮರಳು ಸಾಗಾಟವಾಗುತ್ತಿದೆ ಎಂದು ಶಾಸಕರಾದ ಹೆಚ್.ಕೆ ಸುರೇಶ್, ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು ,ಸಿ.ಎನ್ ಬಾಲಕೃಷ್ಣ ಅವರು ಸಚಿವರ ಗಮನ ಸೆಳೆದರು.
ಆಶ್ರಯ ಮನೆ ನಿರ್ಮಾಣ ಮಾಡಲು ಸ್ಥಳೀಯ ಹೊಳೆಯಿಂದ ಮರಳು ತೆಗೆದು ಬಳಸುವ ಬಡವರಿಗೆ ಯಾವುದೇ ತೊಂದರೆ ಮಾಡಬೇಡಿ. ಆದರೆ ಮಾರಾಟಕ್ಕೆ ಸಂಗ್ರಹಿಸಿ ಸಾಗಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಾಸನ ನಗರಸಭೆಗೆ ಹೊಸದಾಗಿ 25 ಗ್ರಾಮ ಪಂಚಾಯತಿಗಳ ಸೇರ್ಪಡೆಯಿಂದ ಜಮೀನು ನೋಂದಣೆ,ಸ್ವಚ್ಚತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಶಾಸಕರಾದ ಸ್ವರೂಪ್ ಪ್ರಕಾಶ್ ಗಮನ ಸೆಳೆದರು. ಸಮಸ್ಯೆ ಭೇಗ ಬಗೆ ಹರಿಸುವಂತೆ ನಗರಸಭೆ ಆಯುಕ್ತರು ಹಾಗೂ ಉಪ ನೊಂದಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯ್ ಭೂಷಣ್,ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಸೇರಿದಂತೆ ಇತರೆ ಜಿಲ್ಲಾ ಮಟ್ಟ್ದ ಅಧಿಕಾರಿಗಳು ಹಾಜರಿದ್ದರು.
ಕೈ ಕೊಡುತ್ತಿದ್ದ ಮೈಕ್ ಸಚಿವರು ಗರಂ
ಸಭೆ ಆರಂಭವಾಗುತ್ತಿದ್ದಂತೆ ಪರಿಚಯ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪದೇ ಪದೇ ವರ್ಧಕದ ಮೈಕ್ ಸಮಸ್ಯೆಯಾಗುತ್ತಿತ್ತು ಇದಕ್ಕೆ ಜಿ.ಪಂ. ಅಧಿಕಾರಿಗಳು ವಿರುದ್ಧ ಗರಂ ಆದ ಸಚಿವರು, ಸಭೆ ನಡೆಯುವುದು ಗೊತ್ತಿಲ್ಲವೇ. ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ಅರಿವಿಲ್ಲವೇ, ಉಸ್ತುವಾರಿ ಕಾರ್ಯದರ್ಶಿಗಳು ಸಭೆ ಮಾಡುವಾಗಲು ಕೂಡ ಮೈಕ್ ಸರಿ ಇಲ್ಲ ಎಂದು ಹೇಳಿದ್ದರು ಕೂಡ ನೀವು ಏಕೆ ಸರಿ ಮಾಡಿಲ್ಲ ಮುಂದಿನ ಸಭೆಗಳಿಗೆ ಎಲ್ಲಾ ಮೈಕ್‌ಗಳು ಸರಿಯಾಗಿರಬೇಕು ಎಂದು ಎಚ್ಚರಿಸಿದರು.
ಸುಳ್ಳು ಹೇಳಿದರೆ ಅಮಾನತ್ತಿಗೆ ಬರೆಯುತ್ತೇನೆ
ಜಿಲ್ಲೆಯಲ್ಲಿ ಕಲುಷಿತ ಮೊಟ್ಟೆ ಪೂರೈಕೆ ಮಾಡಿ ವರದಿಗಳಾಗುತ್ತಿದ್ದರು ಕೂಡ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದರಿಂದ ಇಷ್ಟೆಲ್ಲ ತೊಂದರೆಯಾಗುತ್ತಿದೆ ಎಂದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುರೇಶ್ ಅವರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು
ನಿನ್ನನ್ನು ನೋಡಿದರೆ ಕೆಲಸ ಮಾಡುವ ತರ ಕಾಣಿಸುತ್ತಿಲ್ಲ, ಏನು ಮಾಡುತ್ತಿದ್ದೀಯಾ ನಿನ್ನ ತಲೆ ಎಲ್ಲಿ ವಾಸ ಮಾಡುತ್ತಿದ್ದೀಯಾ ಹೇಳು ಎಂದರು .ಇದಕ್ಕೆ ಅಧಿಕಾರಿ ಹಾಸನದಲ್ಲೇ ವಾಸವಾಗಿದ್ದೇನೆ ಎಂದಾಗ ಸುಳ್ಳು ಹೇಳಬೇಡ ಪೊಲೀಸರನ್ನು ಕಳಿಸಿ ನಿಮ್ಮ ಮನೆಯ ಪರಿಶೀಲನೆ ಮಾಡಿಸುತ್ತೇನೆ ಸುಳ್ಳು ಹೇಳಿದರೆ ಅಮಾನತ್ತಿಗೆ ಪತ್ರ ಬರೆಯುತ್ತೇನೆ ಎಂದು ತಾಕಿತು ಮಾಡಿದರು.
ಮೊಟ್ಟೆ ಪೂರೈಕೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ಹೋಗುವಂತಹ ಆಹಾರವನ್ನ ಪರಿಶೀಲಿಸಿ ಎಂದು ಹೇಳಿದಾಗ ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡರು ಅಂಗನವಾಡಿಗೆ ಬರುತ್ತಿರುವ ಆಹಾರ ಕಳಪೆ ಮಟ್ಟದಿಂದ ಕೂಡಿದೆ. ಮಕ್ಕಳು ತಿನ್ನದೇ ರಸ್ತೆಯಲ್ಲಿ ಎಸೆದುಕೊಂಡು ಹೋಗುತ್ತಿದ್ದಾರೆ ಇದರ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.