

ಮೈಸೂರು: 2025ನೇ ಸಾಲಿನ ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ದೇಶದ ಮುಕ್ತ ವಿಶ್ವವಿದ್ಯಾಲಯದ ವಿಭಾಗದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2ನೇ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 2025ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ರ‌್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‌್ಯಾಂಕಿಂಗ್ ಪಟ್ಟಿಯನ್ನು ಗುರುವಾರ ಬಿಡುಗಡೆಗೊಂಡಿದೆ.
ಈ ಭಾಗದಲ್ಲಿ ದೇಶದ ಮೂರು ಮುಕ್ತ ವಿಶ್ವವಿದ್ಯಾಲಯಗಳು ಮಾತ್ರ ಸ್ಪರ್ಧೆ ಮಾಡಿದ್ದವು. ಅದರಲ್ಲಿ ದೆಹಲಿಯ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದಿದೆ. ಇದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ರಾಜ್ಯ ವಿಭಾಗದ ವಿಶ್ವವಿದ್ಯಾಲಯಗಳಲ್ಲಿ ಮುಕ್ತ ವಿವಿ ಮೊದಲ ಸ್ಥಾನ ಗಿಟ್ಟಿಸಿಕೊಂಡಂತಾಗಿದೆ.
ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ವಿವಿ ಪರವಾಗಿ ರ‌್ಯಾಂಕ್ ಪ್ರಮಾಣ ಸ್ವೀಕರಿಸಿದರು. ಕುಲಸಚಿವ ಪ್ರೊ.ಎಸ್.ಕೆ ನವೀನ್ ಕುಮಾರ್, ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನಿರಂಜನ್ ರಾಜ್ ಇದ್ದರು
ಮುಕ್ತ ವಿವಿ ನ್ಯಾಕ್ ಎ ಪ್ಲಸ್ ಮಾನ್ಯತೆ ಪಡೆದುಕೊಂಡಿದೆ. ಇದರೀಗ ಈ ರ್ಯಾಂಕ್ ಬಂದಿರುವುದು ಸಂತೋಷವಾಗಿದೆ. ಕೋರ್ಸ್ʼಗಳ ಸಂಖ್ಯೆಯನ್ನು 29ರಿಂದ 80 ಕೋರ್ಸ್ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಒಂದು ಲಕ್ಷ ದಾಟಿಸಲಾಗಿದೆ. ಪ್ರಾಧ್ಯಾಪಕರಿಗೆ ಒಂದು ಲಕ್ಷ ರೂ. ಅನುದಾನ ನೀಡುವ ಮೂಲಕ ಸಂಶೋಧನಾ ಚಟುವಟಿಕೆಗಳಿಗೆ ಆದ್ಯತೆ ಕೊಡಲಾಗಿದೆ. ಜತೆಗೆ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆ 349ಕ್ಕೆ ಹೆಚ್ಚಿಸಲಾಗಿದೆ. ಈ ಎಲ್ಲ ಉಪಕ್ರಮಗಳ ಫಲವಾಗಿ ಈ ರ್ಯಾಂಕ್ ಪಡೆದುಕೊಳ್ಳಲು ಸಾಧ್ಯವಾಗಿದೆ.
> ಪ್ರೊ. ಶರಣಪ್ಪ ವಿ. ಹಲಸೆ,
ಕುಲಪತಿ, ಕರಾಮುವಿ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಎನ್‌ಐಆರ್‌ಎಫ್ ಶ್ರೇಯಾಂಕವನ್ನು ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪಡೆದುಕೊಂಡಿದೆ. ಕರಾಮುವಿ ಸ್ಥಾಪನೆಯಾಗಿ 27 ವರ್ಷ ಬಳಿಕ ಇಂತಹವೊಂದು ರ್ಯಾಂಕ್ ದೊರೆತಿದೆ. ಇದು ಸಂತಸ ಸಂಗತಿ. ನಾವು ಸಲ್ಲಿಸಿದ ದಾಖಲಾತಿಗೆ ಶೇ.70ರಷ್ಟು ಅಂಕ ನಿಗದಿ ಪಡಿಸಲಾಗಿತ್ತು. ಈ ದಾಖಲಾತಿ ವಾಸ್ತವಿಕವಾಗಿದೆ ಎಂಬುದನ್ನು 3ನೇ ಸಂಸ್ಥೆಯಿಂದ ಆಡಿಟ್ ಮಾಡಿಸಲಾಗಿದೆ. ಇದಕ್ಕೆ 30 ಅಂಕ ನಿಗದಿ ಪಡಿಸಲಾಗಿತ್ತು. ಈ ವಿಷಯದಲ್ಲಿ ಮುಕ್ತ ವಿವಿ ಹೆಚ್ಚಿನ ಅಂಕ ಗಳಿಸಿದೆ. ರಾಜ್ಯಮಟ್ಟದ ಮುಕ್ತ ವಿವಿಗಳಲ್ಲಿ ಮೈಸೂರಿನ ಕರಾಮುವಿ ಮೊದಲ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.
ಪ್ರೊ.ಎಸ್.ಕೆ ನವೀನ್ ಕುಮಾರ್,
ಕುಲಸಚಿವ, ಕರಾಮುವಿ