ಮೊದಲ ಪಂಕ್ತಿಯಲ್ಲಿದ್ದ ಅಂಬಿಗರ ಚೌಡಯ್ಯ

IMG-20250121-WA0268
Published on

ಆಲೂರು: 12ನೇ ಶತಮಾನದ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯ ಮೊದಲ ಪಂಕ್ತಿಯಲ್ಲಿ ಇದ್ದ ಶರಣರು. ಇವರ ಆಚಾರ-ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಆಲೂರು ತಾಲೂಕು ಪ್ರಭಾರ ತಹಸೀಲ್ದಾರ್ ಪೂರ್ಣಿಮಾ ಹೇಳಿದರು.

ತಾಲೂಕು ಆಡಳಿತಸೌಧ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಶ್ರೀಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಅವರಲ್ಲಿ ಅಂಬಿಗರ ಚೌಡಯ್ಯ ಸಹ ಒಬ್ಬರು. ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು ಎಂದರು.

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಎ.ಟಿ.ಮಲ್ಲೇಶ್ ಮಾತನಾಡಿ, 12ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ನುಡಿದಂತೆ ನಡೆದವರು, ನಡೆದಂತೆ ನುಡಿದವರು ಅಂಬಿಗರ ಚೌಡಯ್ಯ. ಅವರ 278 ವಚನಗಳು ದೊರಕಿವೆ. ವಚನಾಂಕಿತವನ್ನು ತನ್ನ ಹೆಸರಿನಲ್ಲೆ ಬಳಸಿದ್ದಾರೆ. ಅವರ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕವಾಗಿ ಚತುರತೆ ಎದ್ದು ಕಾಣುತ್ತದೆ ಎಂದರು.

ಕಾಂಗ್ರೆಸ್ ತಾಲೂಕು ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ, ಶಿರಸ್ತೇದಾರ್ ಅಂಕೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್, ಶಿಕ್ಷಕ ವಾಸುದೇವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ತಾಲೂಕು ಅಧ್ಯಕ್ಷ ಟಿ.ಕೆ.ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net