

ಹಾಸನ: ಹಾಸನಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಬೆಳಗಿನ ಜಾವ 6 ಗಂಟೆಯಿಂದ ಹಾಸನಾಂಬ ದರ್ಶನ ಆರಂಭವಾಯಿತು. ಮುಂಜಾನೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕೆಲ ಗಂಟೆಗಳ ಕಾಲ ನೂಕುನುಗ್ಗಲು ಉಂಟಾಯಿತು. ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕಿಲೋಮೀಟರ್‌ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಲಿನಲ್ಲಿ ನಿಂತು ತಾಯಿಯ ದರ್ಶನಕ್ಕೆ ಕಾದು ಕುಳಿತಿದ್ದರು. ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೂ ನೂಕುನುಗ್ಗಲಿನಲ್ಲಿ ಜನರು ದರ್ಶನ ಪಡೆದರು. ಆದರೆ ಯಾವುದೇ ರೀತಿ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಕ್ರಮ ಕೈಗೊಂಡಿತ್ತು. ಮಹಾಮಂಗಳಾರತಿ ನೈವೇದ್ಯ ಹಾಗೂ ದೇವಿಗೆ ವಿವಿಧ ಪೂಜೆಗಳನ್ನು ಮಾಡುವ ಸಲುವಾಗಿ ಸಂಜೆ 6 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು.
ಇನ್ನೂ ದೇವಿಯ ವಿಶೇಷ ದರ್ಶನಕ್ಕೆ ತೆರೆಯಲಾಗಿರುವ ಟಿಕೆಟ್ ಕೌಂಟರ್‌ನಲ್ಲಿ ಮೊದಲನೇ ದಿನ ಒಂದು ಸಾವಿರ ರೂ. ಟಿಕೆಟ್ ಖರೀದಿಗೆ ಜನ ಅಷ್ಟಾಗಿ ಕಂಡುಬರಲಿಲ್ಲ. ಆದರೆ 300 ರೂ. ಟಿಕೆಟ್ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಇದ್ದುದು ಕಂಡುಬಂದಿತು. ಬೆಳಗ್ಗೆ ಭಕ್ತರ ಸಂಖ್ಯೆ ಹೆಚ್ಚಿದ್ದರೂ ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ಭಕ್ತರ ಸಂಖ್ಯೆ ಕಡಿಮೆಯಾಯಿತು. ಮತ್ತೆ ಸಂಜೆಯ ನಂತರ ಭಕ್ತರ ಸಂಖ್ಯೆ ಹೆಚ್ಚಾಯಿತು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.
ಸಾರ್ವಜನಿಕರ ದರ್ಶನದ ಮೊದಲನೇ ದಿನವಾದ ಶುಕ್ರವಾರ ಮಾಜಿ ಸಚಿವ ಎಚ್ ಡಿ ರೇವಣ್ಣ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಕುಟುಂಬಸಮೇತರಾಗಿ ಆಗಮಿಸಿದರು. ಮಾಜಿ ಸಚಿವ ಕೆ ಗೋಪಾಲಯ್ಯ, ಶಾಸಕರಾದ ಎಚ್.ಕೆ. ಸುರೇಶ್, ಎಚ್.ಪಿ. ಸ್ವರೂಪ್, ಸಂಜೆಯ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಮುಜರಾಯಿ ಇಲಾಖೆಯ ಆಯುಕ್ತರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಹಲವು ಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದರು.
ಫೋಟೋ ಕ್ಲಿಕ್ಕಿಸಿಕೊಂಡ ಜನರು
ಸಾರ್ವಜನಿಕ ದರ್ಶನದ ಮೊದಲಿನ ದಿನ ಭಕ್ತರು ದೇವಿಯ ದರ್ಶನ ಪಡೆದುಕೊಳ್ಳುವುದಕ್ಕಿಂತ ದೇವಾಲಯದ ಮುಂಭಾಗ ಮತ್ತು ದೇವರೊಂದಿಗೆ ಫೋಟೋ ತೆಗೆದುಕೊಳ್ಳುವ ಕ್ರೇಜ್ ಹೆಚ್ಚಾಗಿ ಕಂಡುಬಂತು. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ಪೊಲೀಸರು ಫೋಟೋ ತೆಗೆದುಕೊಳ್ಳುತ್ತಿರುವವರನ್ನು ಮುಂದೆ ಕಳಿಸಲು ಹರಸಾಹಸ ಪಡುತ್ತಿದ್ದರು.
ಇಂದು, ನಾಳೆ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನಂಬೆ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ರಜೆ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಗಳಿವೆ. ಹೀಗಾಗಿ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಭದ್ರತೆ ಒದಗಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದರ್ಶನದ ವ್ಯವಸ್ಥೆಯೂ ಕೂಡ ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಬಂದ ಭಕ್ತರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ನೀರಿನ ವ್ಯವಸ್ಥೆ, ಅನಾರೋಗ್ಯ ಉಂಟಾದರೆ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಇದಲ್ಲದೆ 50 ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನೂ ಕೂಡ ಕಲ್ಪಿಸಿರುವುದು ಭಕ್ತರ ಮೆಚ್ಚುಗೆಗೆ ಕಾರಣವಾಗಿದೆ.