ಮೊದಲ ದಿನ 80 ಬಸ್ ಸಂಚಾರ

19_05_Mdy_Ksrtc 02
Published on

ಮಂಡ್ಯ : ಲಾಕ್‌ಡೌನ್ ಸಡಿಲಗೊಳಿಸಿ ರಾಜ್ಯ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಪ್ರಾರಂಭವಾಯಿತು. ಆದರೆ, ಮೊದಲ ದಿನ ಪ್ರಯಾಣಿಕರಿಂದ ನಿರೀಕ್ಷಿತ ಸ್ಪಂದನೆ ಸಿಗದ ಕಾರಣ ನಿಗದಿಪಡಿಸಿಕೊಂಡಿದ್ದ ಬಸ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಯಿತು.
ಜಿಲ್ಲೆಯ ಆರು ಡಿಪೋಗಳಿಂದ 120 ಬಸ್ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗೆಯೇ ಸಿಬ್ಬಂದಿ ಕೂಡ ಹಾಜರಿದ್ದರು. ಆದರೆ, ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಇದರಿಂದಾಗಿ ಪ್ರಯಾಣಿಕರಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯಕ್ಕೆ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶವಿರುವುದರಿಂದ ಮಂಗಳವಾರ 80 ಬಸ್‌ಗಳ ಸಂಚಾರವಷ್ಟೇ ನಡೆಯಿತು.
ಜಿಲ್ಲೆಯಿಂದ ಹೊರಟ ಬಹುತೇಕ ಬಸ್‌ಗಳು ಬೆಂಗಳೂರು, ಮೈಸೂರಿಗೆ ತೆರಳಿವೆ. ಅಂತೆಯೇ, ಈ ಮಾರ್ಗಗಳಿಗೆ ಬೇಡಿಕೆ ಹೆಚ್ಚಾಗಿ ಕಂಡುಬಂತು. ನಿಗದಿಪಡಿಸಿದಂತೆ ಜಿಲ್ಲೆಯ ಗ್ರಾಮೀಣ ಹಾಗೂ ತಾಲೂಕು ಕೇಂದ್ರಕ್ಕೆ ಸಂಚರಿಸಲು ಪ್ರಯಾಣಿಕರೇ ಇರದ ಕಾರಣ ಬಸ್ ಸಂಚಾರ ಮಾಡಲಿಲ್ಲ.
ಸದ್ಯ ಪ್ರತಿ ಬಸ್‌ಗೆ 2500 ರೂ.ನಂತೆ ಹಣ ಬಂದಿದೆ. ಬುಧವಾರದಿಂದ ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರ ನಡೆಸಲು ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಸ್ಥಳ ನಿಗದಿ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಬಸ್ ಹತ್ತಿಸಿಕೊಳ್ಳಲಾಗುತ್ತಿದ್ದು, ಕಡ್ಡಾಯವಾಗಿ ಮಾಸ್ಕ್ ಇರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಬಸ್‌ಗೆ 30 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಇದಲ್ಲದೆ, ಚಾಲಕ ಮತ್ತು ನಿರ್ವಾಹಕರಿಗೆ ನಿಗಮದಿಂದಲೇ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ.
ಬಸ್ ನಿಲ್ದಾಣಕ್ಕೆ ಬನ್ನಿ: ಜಿಲ್ಲಾ ಅಥವಾ ತಾಲೂಕು ಕೇಂದ್ರದಿಂದ ಸಂಚರಿಸುವ ಪ್ರಯಾಣಿಕರು ಸಾಧ್ಯವಾದಷ್ಟು ಬಸ್ ನಿಲ್ದಾಣಕ್ಕೆ ಬರಬೇಕು. ನಿಲ್ದಾಣದಲ್ಲಿಯೇ ಆರೋಗ್ಯ ತಪಾಸಣೆ ನಡೆಸುವುದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಂಗಳವಾರದಿಂದ 120 ಬಸ್‌ಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಬೇಡಿಕೆ ಇಲ್ಲದ ಕಾರಣ 80 ಬಸ್ ಸಂಚಾರ ನಡೆಸಿವೆ. ಈ ಪೈಕಿ ಬೆಂಗಳೂರು, ಮೈಸೂರಿಗೆ ಹೆಚ್ಚಿನ ಸಂಚಾರ ನಡೆದಿದೆ. ಮುಂದಿನ ದಿನದಲ್ಲಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಖ್ಯೆ ಹೆಚ್ಚಿಸಲಾಗುವುದು. ಕಿರಣ್‌ಕುಮಾರ್ ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ, ಮಂಡ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net