

ಚಿಕ್ಕಬಳ್ಳಾಪುರ: ಯುವ ಕವಿಗಳಿಗೆ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಹೇಳಿದರು.
ತಾಲೂಕಿನ ಮೊಟ್ಲೂರಿನಲ್ಲಿ ಪದ್ಮಶ್ರೀ, ನಾಡೋಜ ಕೆ.ಎಸ್.ನಿಸಾರ್ ಅಹಮದ್ ಪುತ್ಥಳಿ ಅನಾವರಣ ಹಾಗೂ ನಿಸಾರ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಕಾರ್ಯಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರಲ್ಲಿ ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಪ್ರಮುಖರು. ಕನ್ನಡಮ್ಮನ ಸೇವೆಗೆ ಜೀವನವನ್ನೇ ಮುಡುಪಾಗಿಟ್ಟಿದ್ದರು. ಎಂದಿಗೂ ಅವರು ರಚಿಸಿರುವ ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಮರೆಯಲಾಗುವುದಿಲ್ಲ. ಇದು ಜಗತ್ತು ಇರುವವರೆಗೂ ಜನಪ್ರಿಯವಾಗಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೆಲ ಸಿನಿಮಾ ಹಾಡುಗಳು ಮತ್ತು ಕವಿತೆಗಳ ನೆನಪು ಬಹು ಬೇಗನೇ ಮಾಸಿ ಹೋಗುತ್ತಿವೆ. ಇದಕ್ಕೆ ಹಿಂದಿನ ಮಹಾನ್ ಕವಿಗಳ ಮಾದರಿಯಲ್ಲಿ ಸಾಹಿತ್ಯ ರಚನೆಯ ಕೌಶಲ ವೃದ್ಧಿಗಾಗಿ ಯುವ ಜನರನ್ನು ಪ್ರೇರೇಪಿಸಬೇಕಾಗಿದೆ ಎಂದರು.ಮಲೆನಾಡಿನ ಮಾದರಿಯ ಸೊಬಗಿನ ವಾತಾವರಣದಲ್ಲಿ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ನಿಸಾರ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಹಾಗೂ ಸ್ಮಾರಕವು ಈ ಭಾಗದ ಕಲಿಕಾರ್ಥಿಗಳಿಗೆ ಸಾಹಿತ್ಯ, ಸಂಗೀತ, ನೃತ್ಯ ಕಲಿಕೆಗೆ ಉತ್ತಮ ವೇದಿಕೆಯಾಗಲಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಜಿಲ್ಲೆಯಲ್ಲಿ ನಿಸಾರ್ ಅಹಮದ್ ಸಂಸ್ಥೆಯ ಸ್ಥಾಪನೆಯು ಇಲ್ಲಿನ ಯುವ ಕವಿಗಳು ಮತ್ತು ಕಲಾವಿದರ ಪ್ರತಿಭೆ ಪ್ರೋತ್ಸಾಹಕ್ಕೆ ಅನುಕೂಲವಾಗಲಿದೆ. ಕನ್ನಡ ನಾಡಿನ ನೈಸರ್ಗಿಕ ಸೌಂದರ್ಯ, ಭೌಗೋಳಿಕ ಮಹತ್ವವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುವ ನಿಸಾರ್ ಅಹಮದ್ ರಚನೆಯ ನಿತ್ಯೋತ್ಸವ ಹಾಡಿನಿಂದ ಕನ್ನಡಾಂಬೆಗೆ ಹಾಗೂ ತಾಯಿ ಭುವನೇಶ್ವರಿಗೆ ದಿನನಿತ್ಯದ ಉತ್ಸವವಾಗುತ್ತಿದೆ ಎಂದು ಹೇಳಿದರು.ಜಿಲ್ಲೆಯ ನಿಸಾರ್ ಅಹಮದ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಅಗತ್ಯ ಸವಲತ್ತುಗಳನ್ನು ಸರ್ಕಾರದಿಂದ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜು ಮಾತನಾಡಿ. ಶಾಸಕ ಯು.ಟಿ.ಖಾದರ್ ಮಾತನಾಡಿ, ಸಮಾಜಕ್ಕೆ ಮಾದರಿಯಾಗಿರುವ ಮಹನೀಯರ ಆದರ್ಶ ತತ್ವ ಜೀವನದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಕವಿ ಬಿ.ಆರ್.ಲಕ್ಷ್ಮಣರಾವ್, ಸುಗಮ ಸಂಗೀತ ಪರಿಷತ್ತಿನ ವೈ.ಕೆ.ಮುದ್ದುಕೃಷ್ಣ, ಡಿಸಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಎಸಿ ಜಿ.ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮತ್ತಿತರರು ಇದ್ದರು.
2.5 ಎಕರೆಯಲ್ಲಿ ಸ್ಮಾರಕ: ರಾಜ್ಯ ಸರ್ಕಾರವು ತಾಲೂಕಿನ ನಂದಿ ಹೋಬಳಿಯ ಮೊಟ್ಲೂರುವಿನಲ್ಲಿ ಮಂಜೂರು ಮಾಡಿರುವ 2.5 ಎಕರೆ ಜಾಗದಲ್ಲಿ ನಿಸಾರ್ ಅಹ್ಮದ್ ಸ್ಮಾರಕ ನಿರ್ಮಿಸಲಾಗಿದೆ. ಜತೆಗೆ ಸಂಗೀತಗಾರರಿಗೆ ಉತ್ತಮ ತರಬೇತಿ ಕೇಂದ್ರ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಕಲಿಕಾ ಶಾಲೆ ಹಾಗೂ ಸಾಹಿತ್ಯಾಸಕ್ತರಿಗೆ ಉತ್ತಮ ಕಮ್ಮಟ, ಮ್ಯೂಸಿಯಂ ನಿರ್ಮಾಣದ ಮೂಲಕ ಸ್ಮಾರಕವನ್ನು ಆಕರ್ಷಕ ತಾಣವನ್ನಾಗಿಸಲು ಉದ್ದೇಶಿಸಲಾಗಿದೆ.
ಕವಿತೆಗಳ ಗೀತಾ ಗಾಯನ: ಕವಿ ಕೆ.ಎಸ್.ನಿಸಾರ್ ಅಹಮದ್ ರಚನೆಯ ಜೋಗದ ಸಿರಿ ಬೆಳಕಿನಲ್ಲಿ ಸೇರಿ ಹಲವು ಕವಿತೆಗಳ ಗೀತಗಾಯನ ಗಮನ ಸೆಳೆಯಿತು. ಕಲಾವಿದರು ಮತ್ತು ವಿದ್ಯಾರ್ಥಿಗಳ ಸುಮಧುರ ಧ್ವನಿಯು ಮೆಚ್ಚುಗೆಗೆ ಪಾತ್ರವಾಯಿತು. ಸಚಿವರು ನಿಸಾರ್ ಅಹಮದ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.