ಮೊಟ್ಟೆ ಎಸೆತ ಕೀಳುಮಟ್ಟದ ರಾಜಕಾರಣ: ಎಂಎಲ್ಸಿ ಡಾ.ಡಿ.ತಿಮ್ಮಯ್ಯ ಕಿಡಿ

c27ccdb7-5c96-4e88-83b1-57ac0d6f9c81
Published on

ಮೈಸೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಬಿಜೆಪಿ ಕಾರ್ಯಕರ್ತರದ್ದು ಹೇಡಿ ಮತ್ತು ಕೀಳುಮಟ್ಟದ ರಾಜಕಾರಣ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಟೀಕಿಸಿದರು.

ಸಿದ್ದರಾಮಯ್ಯ ಜನಪ್ರಿಯತೆ ಕಂಡು ದಿಗಿಲುಗೊಂಡಿರುವ ಬಿಜೆಪಿ ನಾಯಕರು ಪ್ರಜಾಸತ್ತಾತ್ಮಕವಾಗಿ ಎದುರಿಸಲಾಗದೆ ಹೇಡಿಗಳಂತೆ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನಿಸಿದ್ದಾರೆ. ಮೊಟ್ಟೆ ಎಸೆದ ಸಂಪತ್ತು ಕಾಂಗ್ರೆಸ್ ಕಾರ್ಯಕರ್ತನೆಂದು ಬಿಂಬಿಸಲು ಹೋಗಿ ಬಿಜೆಪಿಗೆ ಮುಖಭಂಗವಾಗಿದೆ. ಬಿಜೆಪಿಯ ಕುತಂತ್ರ, ಕೆಟ್ಟ ಸಂಸ್ಕೃತಿ ಬಹಿರಂಗವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆಂದು ಗುಲ್ಲು ಎಬ್ಬಿಸುತ್ತಾ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಹೊರಟಿರುವುದು ಬಿಜೆಪಿಯ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ. ಯಾವುದೇ ಆಹಾರ ಸೇವಿಸುವುದು ಅವರವರ ಇಚ್ಛೆಗೆ ಬಿಟ್ಟಿದ್ದು. ಇಂತದ್ದೇ ಆಹಾರ ಸೇವಿಸಬೇಕೆನ್ನುವುದು ವೈಯಕ್ತಿಕ ಸ್ವಾತಂತ್ರೃಹರಣವಾಗಲಿದೆ. ಸಾಮಾನ್ಯ ತಿಳವಳಿಕೆ ಇಲ್ಲದ ಬಿಜೆಪಿ, ಆರ್‌ಎಸ್‌ಎಸ್ ನಾಯಕರು ಜನರ ಮಧ್ಯೆ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಕುರಿತು ಸಂಸದ ಪ್ರತಾಪ ಸಿಂಹ ವೈಯಕ್ತಿಕ ಟೀಕೆ ಮಾಡಿದ್ದಾರೆ. ಅಲ್ಲದೆ ಅವರ ಪತ್ನಿ ಕುರಿತು ಪ್ರಸ್ತಾಪ ಮಾಡಿರುವುದು ಅವರ ಕೆಟ್ಟ ನಡವಳಿಕೆ ಮತ್ತು ಅಪ್ರಬುದ್ಧತೆ ತೋರಿಸುತ್ತದೆ. ಇವರು ಆರ್‌ಎಸ್‌ಎಸ್, ಬಿಜೆಪಿಯವರನ್ನು ಮೆಚ್ಚಿಸಲು ಹೀಗೆ ಪ್ರಲಾಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಆರ್‌ಎಸ್‌ಎಸ್, ಬಿಜೆಪಿ ಸಿದ್ಧಾಂತ ಭಾರತದ ಜನಮಾನಸಕ್ಕೆ ವಿರುದ್ಧವಾಗಿದೆ. ಪ್ರಜಾಪ್ರಭುತ್ವದ ಅಡಿಯಲ್ಲೇ ತಮ್ಮ ಕೋಮುವಾದದ ಸಿದ್ಧಾಂತ ಬಿತ್ತಲು ಹೊರಟಿರುವುದು ಹೆಚ್ಚು ದಿನ ನಡೆಯುವುದಿಲ್ಲ. ಹಿಂದುತ್ವ ಪ್ರತಿಪಾದಿಸುವವರು ಅಸಹಿಷ್ಣುಗಳು. ಹಿಂದುತ್ವವಾದಿಗಳು ಮಹಾತ್ಮಗಾಂಧಿ ಕೊಂದ ನಾಥೂರಾಮ್ ಗೋಡ್ಸೆಯ ಸಂತತಿಯವರು. ಇವರೆಲ್ಲ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ನೈಜ ಹಿಂದು ಧರ್ಮದ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರೃ ಹೋರಾಟಕ್ಕೆ ಮತ್ತು ಅಸ್ಪಶ್ಯತೆ ನಿವಾರಣೆಗೆ ಜನಸಂಘ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೊಡುಗೆ ಏನು? ಇತ್ತೀಚಿಗೆ ಅನವಶ್ಯಕವಾಗಿ ಧರ್ಮ ಧರ್ಮಗಳ ಮಧ್ಯೆ ಕಂದಕವನ್ನು ಉಂಟು ಮಾಡಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಮತೀಯ ಗಲಭೆಗೆ ಬಿಜೆಪಿ, ಆರ್‌ಎಸ್‌ಎಸ್ ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net