ಮೊಗಳ್ಳಿ ಗಣೇಶ್‌ರ ನಿರ್ಭೀತ ಮನೋಧರ್ಮ ಮಾದರಿಯಾಗಲಿ

mysore
Published on

ಮೈಸೂರು: ಸತ್ಯ ಹೇಳಲು ಹೆದರುವ ಪ್ರಸ್ತುತ ಸಮಾಜಕ್ಕೆ ಸಾಹಿತಿ ಮೊಗಳ್ಳಿ ಗಣೇಶ್ ಅವರ ನಿರ್ಭೀತ ಮನೋಧರ್ಮ ಮಾದರಿಯಾಗಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ತಿಳಿಸಿದರು.

ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಥೆಗಾರ ‘ಮೊಗಳ್ಳಿ ಗಣೇಶ್: ಬಾಳಿನ ಹಸಿವು-ಕತೆಗಳ ಕಸುವು’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕಿನ ವಾಸ್ತವತೆ ತಿಳಿಸುವ ಕಥೆಗಾರ, ಭಾರತದೊಳಗಿನ ನೈಜ ಪರಿಸ್ಥಿತಿಯನ್ನು ತನ್ನ ಕಥೆಯ ಒಳಗೆ ಅನಾವರಣ ಮಾಡಿದವರು. ಕನಸಿನ ಭಾರತದ ಕಟುಸತ್ಯದ ಬಹುಮುಖ ತಮ್ಮ ಕಥೆಯಲ್ಲಿ ಪ್ರಕಟಿಸಿದ್ದಾರೆ ಎಂದರು.

ಸಮಾಜದಲ್ಲಿನ ಅಸಮಾಧಾನದೊಂದಿಗೆ ಹುಟ್ಟುವ ಕ್ರೋಧ, ತಾರತಮ್ಯದ ಧೋರಣೆ, ಅಸಮಾನತೆಯ ಆಕ್ರೋಶಗಳು ಅವರನ್ನು ಅಪರೂಪದ ಕಥೆಗಾರನನ್ನಾಗಿ ರೂಪಿಸಿತು. ನಿಜ ಮನುಷ್ಯರ ಹುಡುಕಾಟ, ಬದುಕಿನ ಆದರ್ಶನೀಯತೆ, ವಿಶ್ವಮಾನವತ್ವ ಕಥೆಯ ಮುಖ್ಯ ಆಶಯವಾಗಿತ್ತು. ಬರೆದು ಹಗುರಾಗಬೇಕು ಎಂದು ಯಾವಾಗಲೂ ಹೇಳುತ್ತಿದ್ದರು.

ಮಹಾರಾಜ ಕಾಲೇಜಿನಲ್ಲಿ ಓದುವಾಗಲೇ ಬರವಣಿಗೆಯ ಹಸಿವು, ಸಾಮಾಜಿಕ ಪರಿವರ್ತನೆಯ ಧ್ಯೇಯ, ವರ್ತಮಾನದ ವೈಚಿತ್ರ್ಯಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಬದುಕಿನ ಅಸಹ್ಯಗಳನ್ನು ಅಂತರಂಗದ ಸೆಳೆತದ ಮುಖಾಂತರ ಕಥೆ ರೂಪಿಸುತ್ತಿದ್ದ ಅದ್ಭುತ ಕಲೆಗಾರನಾಗಿದ್ದರು. ಬಂಡಾಯ ಮನೋಧರ್ಮದ ಮೇರು ಪ್ರತಿಭೆಯಾಗಿದ್ದರು ಎಂದರು.

ಚಿಂತಕ ಡಾ. ಸ್ವಾಮಿ ಆನಂದ್ ಮಾತನಾಡಿ, ಸಂತೆಮೊಗ್ಗೇನಹಳ್ಳಿಯಲ್ಲಿ ಬೆಳೆದ ಗಣೇಶ್ ಅವರು ಬದುಕಿನ ಛಲ, ಪುಸ್ತಕ ಪ್ರೀತಿ, ಸಾಹಿತ್ಯದ ಒಲವು ಮೈಗೂಡಿಸಿಕೊಂಡಿದ್ದರು. ಬಡತನ, ಅಸ್ಪಶ್ಯತೆ, ಶೋಷಣೆ ತನ್ನ ಕಥೆಯ ಮುಖ್ಯ ಅಂದರವನ್ನಾಗಿ ಮಾಡಿಕೊಂಡಿದ್ದರು. ಗ್ರಾಮೀಣ ಪ್ರದೇಶದ ನಿಜ ಚಿತ್ರಣವನ್ನು ತಮ್ಮ ಕಥೆಗಳ ಮೂಲಕ ಬಿಂಬಿಸಿದ್ದಾರೆ. ಅಲ್ಲಿ ಬರುವ ಪ್ರತಿಯೊಂದು ಪಾತ್ರವೂ ಸಹಜವಾಗಿ ಮೂಡಿಬಂದಿವೆ ಎಂದರು.

ಬುಗುರಿ ಕಥೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ ವಿಶೇಷ ಛಾಪನ್ನು ಮೂಡಿಸಿದರು. ಶೋಷಿತ ಸಮಾಜದ ನೈಜ ಘಟನೆಯನ್ನು ಕಥೆಯಾಗಿಸಿದವರು. ಚಲುವ ಪಾತ್ರದ ಮೂಲಕ ದಲಿತ ಸಂವೇದನೆಯನ್ನು ಕನ್ನಡ ಕಥಾ ಜಗತ್ತಿಗೆ ಪರಿಚಯಿಸಿಕೊಟ್ಟರು.

ಬುಗುರಿಯ ರೂಪದಲ್ಲಿ ಬಂದ ಆಸೆ ಕಮರಿ ಹೋಗುವ ಮನಸ್ಸಿನೊಳಗಿನ ನಿರ್ಲಕ್ಷಿತ ಸಮುದಾಯದ ಪರಿಸ್ಥಿತಿಯನ್ನು ಅನಾವರಣ ಮಾಡಿದ್ದಾರೆ. ಸಮಾಜದ ತಾರತಮ್ಯದ ಬದುಕಿನಿಂದ ನೊಂದ ಕಥೆಗಾರ, ಶೋಷಿತರ ಪರವಾಗಿ ಧೈರ್ಯಯುತ ಧ್ವನಿಯನ್ನು ಸಮಾಜದಲ್ಲಿ ಎತ್ತಿದವರು ಎಂದರು.

ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ.ಎಚ್.ಪಿ.ಮಂಜು ಮಾತನಾಡಿ, ಮೊಗಳ್ಳಿ ಗಣೇಶ್ ಅವರು ಜಾನಪದ ವಿಷಯದ ಬಗ್ಗೆ ಅಪಾರವಾದ ಒಲವಿದ್ದವರು.

ರಾಜಕೀಯ ವ್ಯಕ್ತಿಗಳು ಆದರ್ಶ ಪಾಲನೆ ಮಾಡಬೇಕೆಂದು ಹೇಳುತ್ತಿದ್ದರು. ರಾಜಕೀಯ ವಿಚಾರದಿಂದ ದೂರ ಉಳಿದರು. ಶೋಷಿತರ ಬಗೆಗಿನ ಆಕ್ರೋಶ ಸಂವಿಧಾನಿಕವಾಗಿ ನಿವಾರಣೆ ಮಾಡುವಲ್ಲಿ ರಾಜಕೀಯದ ಪಾತ್ರ ಅಪಾರವಾಗಿದೆ ಎಂದು ತಿಳಿಸುತ್ತಿದ್ದರು. ಸಾಂಸ್ಕೃತಿಕ ಪಲ್ಲಟ ಕುರಿತು ಅಸ್ಪಶ್ಯತೆಯ ಕಸುವಿನೊಂದಿಗೆ ಬದುಕಿನ ಹುಡುಕಾಟ ಮೊಗಳ್ಳಿ ಗಣೇಶ್ ಅವರ ಕಥೆಗಳಲ್ಲಿ ಅನಾವರಣಗೊಂಡಿವೆ ಎಂದರು.

ಜಾಗತೀಕರಣ ಅಸ್ಪಶ್ಯ ಸಮಾಜದ ಬದುಕನ್ನು ಕಸಿದುಕೊಂಡಿದೆ. ಬಡತನ, ಆಕ್ರೋಶ, ಕೀಳರಿಮೆಗಳು, ಅಸಮಾನತೆ, ದೌರ್ಜನ್ಯ, ದುಃಖ ಕಥೆಗಳ ಕೇಂದ್ರಬಿಂದುಗಳಾಗಿದ್ದವು. ಪ್ರಶಸ್ತಿ ಅರಸಿ ಹೋದವರಲ್ಲ. ನಿಷ್ಠುರ ಮನೋಭಾವದ ವ್ಯಕ್ತಿತ್ವ ಉಳ್ಳವರಾಗಿದ್ದರು. ಇವರ ಸಾಹಿತ್ಯ ಕೃತಿಗಳು ಮತ್ತಷ್ಟು ವಿಮರ್ಶೆಗೆ ಒಳಗಾಗಬೇಕು ಎಂದರು.

ಪ್ರಾಂಶುಪಾಲೆ ಡಾ. ಬಿ.ಆರ್.ಜಯಕುಮಾರಿ ಮಾತನಾಡಿ, ಮೊಗಳ್ಳಿ ಗಣೇಶ್ ಅವರು ದಲಿತ ಬದುಕಿನ ಒಳನೋಟ ಕಟ್ಟಿಕೊಟ್ಟಿದ್ದಾರೆ. ಬುಗುರಿ ಕಥೆಯಲ್ಲಿ ಭಿತ್ತರವಾಗುವ ಮಾನವ ಸಂವೇದನೆ ಜಾಗತಿಕ ಮಟ್ಟದಲ್ಲಿ ಸಮಾಜದ ತಾರತಮ್ಯ ಧೋರಣೆಯ ವಿರುದ್ಧ ಆಕ್ರೋಶ ಬಿಂಬಿಸುತ್ತದೆ. ಬದುಕಿನ ಸತ್ಯಗಳನ್ನು ತಮ್ಮ ಕಥೆಗಳಲ್ಲಿ ಹಲವು ನೈಜ ಪಾತ್ರದೊಂದಿಗೆ ವಿವರಿಸಿದ್ದಾರೆ. ಬರವಣಿಗೆಯ ಬಗ್ಗೆ ಅಪಾರ ಒಲವಿದ್ದವರು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಕನ್ನಡ ಸಹಾಯಕ ಪ್ರಾಧ್ಯಾಪಕ ಸಿ.ಎಂ. ಕಿರಣ್‌ಕುಮಾರ್ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net