

ಚಾಮರಾಜನಗರ: ಸಾಹಿತ್ಯ ಲೋಕದಲ್ಲಿ ನೇರ, ನಡೆ, ನುಡಿ ಹೊಂದಿದ್ದ ಮೊಗಳ್ಳಿ ಗಣೇಶ್ ದಲಿತ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಎಂ ನರಸಿಂಹಮೂರ್ತಿ ಹೇಳಿದರು.
ನಗರದ ರೋಟರಿ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕಗಳ ಸಹಯೋಗದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಮೊಗಳ್ಳಿ ಗಣೇಶ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
70ರ ದಶಕದಲ್ಲಿ ದಲಿತ ಸಾಹಿತ್ಯದ ಮುಂಚೂಣಿಯಲ್ಲಿ ಡಾ.ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಮುಳ್ಳೂರು ನಾಗರಾಜ, ಕೆ ಬಿ ಸಿದ್ದಯ್ಯ, ಅಂಥವರ ಸಾಲಿನಲ್ಲಿ ಮೊಗಳ್ಳಿ ಗಣೇಶ್ ಸಹ ಗುರುತಿಸಿಕೊಂಡವರು ಎಂದು ಸ್ಮರಿಸಿದರು.
ಅವರ ಕಥೆಗಳಲ್ಲಿ ದಲಿತ ಸಮುದಾಯದ ಸಂವೇದನೆಯನ್ನು ಕಾಣಬಹುದು. ಕನ್ನಡ ಜಾನಪದ ಅಧ್ಯಯನಕ್ಕೆ ದಲಿತ ಜಾನಪದ ಪರಿಕಲ್ಪನೆ ಮೂಲಕ ಹೊಸ ಆಯಾಮ ನೀಡಿದರು ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಸ್ವಾಮಿ(ಪಾಪು) ಮಾತನಾಡಿ, ಭೌತಿಕವಾಗಿ ಗಣೇಶ್ ಇಹಲೋಕದಿಂದ ದೂರವಾಗಿದ್ದರೂ ಅವರ ಸಾಹಿತ್ಯ ಬರಹಗಳ ಮೂಲಕ ಓದುಗರ ಮನದಲ್ಲಿ ಜಾಗೃತರಾಗಿದ್ದಾರೆ. ಅವರ ಬರಹಗಳನ್ನು ಓದುಗರು ಜೀವಂತವಾಗಿಡಬೇಕು ಎಂದರು.
ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷ ಡಾ. ಪ್ರೇಮ, ದಸಾಪ ಜಿಲ್ಲಾ ಕಾರ್ಯದರ್ಶಿ ಬಸವಣ್ಣ ಮೂಕಹಳ್ಳಿ, ತಾಲೂಕು ಅಧ್ಯಕ್ಷ ಶಿವಕುಮಾರ್ ಸರಗೂರು, ಡಾ.ಅನಂತ್ ಕುವರ್, ಚಾಮರಾಜನಗರ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಲ್ಲಿಕಾರ್ಜುನ, ಕಲಾವಿದ ಶಿವಶಂಕರ ಚಟ್ಟು, ಹೋರಾಟಗಾರ ಆಲೂರು ನಾಗೇಂದ್ರ, ಇತರರು ಉಪಸ್ಥಿತರಿದ್ದರು.