ಮೊಗರಹಳ್ಳಿಮಂಟಿ ಗ್ರಾಮಸ್ಥರ ಪ್ರತಿಭಟನೆ

SRP _19-01 jpg
Published on

ಶ್ರೀರಂಗಪಟ್ಟಣ: ತಾಲೂಕಿನ ಪಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.128ರಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿರುವ ಶ್ರಮಿಕ ಬಡ ಕುಟುಂಬಗಳಿಗೆ ಸರ್ಕಾರ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗರಹಳ್ಳಿಮಂಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ಪಟ್ಟಣದ ಕುವೆಂಪು ವೃತ್ತದಲ್ಲಿ ಶನಿವಾರ ಸಮಿತಿಯ ಮುಖಂಡ ವೆಂಕಟಗಿರಿಯಯ್ಯ ನೇತೃತ್ವದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಮೂಲಕ ತಾಲೂಕು ಕಚೇರಿವರೆಗೆ ತೆರಳಿ ಧರಣಿ ನಡೆಸಿದರು.


ಗ್ರಾಮದ ಮುಖಂಡ ಡಾನ್ ಹೆನ್ರಿ ರಿಜಾರಿಯೋ ಮಾತನಾಡಿ, ಈ ಹಿಂದೆ ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣಕ್ಕಾಗಿ ಕೂಲಿಕಾರರಾಗಿ ಆಗಮಿಸಿದ ನಮ್ಮ ಪೂರ್ವಜರ 3ನೇ ತಲೆಮಾರಿನ ಜನರು ತಾಲೂಕಿನಲ್ಲಿಯೇ ಹುಟ್ಟಿ ಬೆಳೆದಿದ್ದು, ತಾಲೂಕು ಆಡಳಿತ 1994ರಲ್ಲಿ ಆಶ್ರಯ ಯೋಜನೆಯಡಿ ಸರ್ವೇ ನಂ.128ರ ಜಾಗದಲ್ಲಿ 202 ಫಲಾನುಭವಿಗಳಿಗೆ ನಿವೇಶನಗಳ ನೀಡಿ ಹಕ್ಕುಪತ್ರ ವಿತರಿಸಿದೆ. ಈ ಜಾಗದ ಪಕ್ಕದಲ್ಲಿ ಖಾಲಿ ಇದ್ದ 2 ಎಕರೆ ಸರ್ಕಾರಿ ಗೋಮಾಳದ ಹಳ್ಳದ ಭೂಮಿಯನ್ನು ಸಮತಟ್ಟು ಮಾಡಿಕೊಂಡು 200ಕ್ಕೂ ಹೆಚ್ಚು ಜನರು ಮನೆ ನಿರ್ಮಾಣ ಮಾಡಿಕೊಂಡು ಹಲವು ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಅಕ್ರಮ-ಸಕ್ರಮ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಕೆಲ ಅಧಿಕಾರಿಗಳು ಹಕ್ಕುಪತ್ರ ನೀಡದೆ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.


ಗ್ರಾಮದ ಆಶ್ರಯ ಯೋಜನೆ ಫಲಾನುಭವಿಗಳ ನಿವೇಶಗಳಲ್ಲಿ ಯಾವುದೇ ಅನಧಿಕೃತ ಕಟ್ಟಡ ಇದ್ದರೂ ಅದನ್ನು ತೆರವುಗೊಳಿಸುವ ನಿರ್ಧಾರ ಸ್ವಾಗತರ್ಹ. ಆದರೆ ಇದೇ ನೆಪದಲ್ಲಿ ಸರ್ವೇ ನಂ.128ರ ಬಳಿಯ ಜಾಗದಲ್ಲಿ ವಾಸಿಸುತ್ತಿರುವ ಇತರ ಶ್ರಮಿಕ ಜನರನ್ನು ಒಕ್ಕೆಲೆಬ್ಬಿಸುವ ತಂತ್ರಗಾರಿಕೆ ನಡೆದಿದ್ದು, ಇದರ ಸರಿಯಲ್ಲ. ತಕ್ಷಣ ಸರ್ಕಾರ ಮಧ್ಯ ಪ್ರವೇಶಿಸಿ ಬಡಜನರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.


ಕದಸಂಸ ರಾಜ್ಯ ಅಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರದೊಂದಿಗೆ ರಸ್ತೆ, ಬೀದಿದೀಪ, ಕುಡಿಯುವ ನೀರು, ಚರಂಡಿ, ಶೌಚಾಲಯದ ವ್ಯವಸ್ಥೆ ಕಲ್ಪಿಸಿ ದಲಿತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ದಸಂಸ ಜಿಲ್ಲಾಧ್ಯಕ್ಷ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಮರಳಗಾಲ ಸುರೇಶ್, ಜಿಲ್ಲಾ ಕಾರ್ಯದರ್ಶಿ ಕುಮಾರ್, ಸುರೇಶ್‌ಕುಮಾರ್, ಸೋಮಸೇಖರ್ ಮೇನಾಗ್ರ, ಪಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಅಂಬಿಕಾ, ಮುಖಂಡರಾದ ಷಣ್ಮುಗಂ, ಆರ‌್ಮುಗಂ, ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net