ಮೈಸೂರು ಸುಸ್ಥಿರ ಅಭಿವೃದ್ಧಿಯ ಪ್ರಯೋಗ ಶಾಲೆ

12
Published on

ಮೈಸೂರು: ಮೈಸೂರು ಸಂಸ್ಥಾನವು ಸುಸ್ಥಿರ ಅಭಿವೃದ್ಧಿಯ ಪ್ರಯೋಗ ಶಾಲೆ. ನೂರು ವರ್ಷಗಳ ಹಿಂದೆಯೇ ಈ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮಹಾರಾಜರು ಜಾರಿಗೊಳಿಸಿದ್ದರು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಆಯೋಜಿಸಿರುವ ಜಾಗತಿಕ ಹಬ್ಬ ‘ಅನ್ ಲೀಸ್-2022’ ಕಾರ್ಯಕ್ರಮದಲ್ಲಿ ಮಾತನಾಡಿದರು.

1910ರಿಂದ 1945ರ ವರೆಗೆ ಮೈಸೂರು ಸಂಸ್ಥಾನದ ಸುವರ್ಣ ಯುಗ. ಆ ಸಂದರ್ಭದಲ್ಲಿ ಸಂಶೋಧನೆ, ತಂತ್ರಜ್ಞಾನ ಬಳಕೆಯೊಂದಿಗೆ ಅಭಿವೃದ್ಧಿ ಪರ್ವ ಸೃಷ್ಟಿಯಾಗಿತ್ತು. ಉಕ್ಕು, ಸಿಮೆಂಟ್, ಸೋಪು, ರೇಷ್ಮೆ, ಶ್ರೀಗಂಧ ಕುರಿತು ಪ್ರತ್ಯೇಕ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲಾಯಿತು. ಇದು ಮೈಸೂರು ಹಳೇ ಪ್ರಾಂತ್ಯದಲ್ಲಿ ಸುಸ್ಥಿರ ಅಭಿವೃದ್ಧಿ ಚಲನಶೀಲತೆ ನೀಡಿತು ಎಂದರು.

ಗುಣಮಟ್ಟ ಶಿಕ್ಷಣದಿಂದಲೇ ಜಗತ್ತಿನ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು  ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು

ಕೇಂದ್ರ, ರಾಜ್ಯ ಸರ್ಕಾರಗಳು ಶಿಕ್ಷಣ, ಅದರ ಗುಣಮಟ್ಟ ವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಗುಣಾತ್ಮಕ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಆದಾಗಿಯೂ ವಿವಿಧ ಕಾರ್ಯಯೋಜನೆಗಳ ಮೂಲಕ ಗುರಿ ಸಾಧಿಸಲಾಗುತ್ತಿದೆ ಎಂದರು.

ಅನ್ವೇಷಣೆ ಮೂಲಕ ಜಾಗತಿಕ ಮಟ್ಟದ ಗಮನವನ್ನು ಸೆಳೆದ ರಾಜ್ಯವೇ ಕರ್ನಾಟಕ. ಇದು ಸಂಶೋಧನೆ ತಾಣ. ಇಲ್ಲಿ ಪ್ರತಿಭಾವಂತರು ಅಧಿಕ. ಅವರೆಲ್ಲ ವಿವಿಧ ದೇಶಗಳ ಕಡೆಗೆ ಚದುರಿಹೋಗಿದ್ದಾರೆ. ರಾಜ್ಯದಲ್ಲಿ ಮೂಲಸೌಕರ್ಯ ಪ್ರಗತಿಗೆ ಒತ್ತು ನೀಡಲಾಗಿದೆ. ಶೇ.15ರಷ್ಟು ನವೀಕರಿಸಬಹುದಾದ ಇಂಧನವನ್ನು ಉತ್ಪಾದನೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ದೇಶದಲ್ಲಿ ರಾಜ್ಯ 5ನೇ ಸ್ಥಾನದಲ್ಲಿ ಇದೆ. ಸುಸ್ಥಿರ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ ಎಂದರು.

ಅನ್‌ಲೀಸ್ ಮುಖ್ಯಸ್ಥ ಫ್ಲೆಮ್ಮಿಂಗ್ ಬೆಸೆನ್ಬಚೆರ್ ಮಾತನಾಡಿ, ಜಾಗತಿಕ ತಾಪಮಾನ ಸಮಸ್ಯೆ ಕುರಿತು ಜಗತ್ತು ಗಂಭೀರವಾಗಬೇಕಿದೆ. ಇದು ಜೀವವೈವಿಧ್ಯತೆ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ವೈಪರೀತ್ಯಕ್ಕೂ ಕಾರಣವಾಗುತ್ತಿದೆ. 5, 6 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾದರೂ ಮನುಕುಲಕ್ಕೆ ಕಂಟಕ ಎದುರಾಗಲಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ತುರ್ತಾಗಿ ಆಗಬೇಕು. ಈ ಸಮ್ಮೇಳನದಲ್ಲಿ ಈ ಕುರಿತು ಸಮಗ್ರ ಚರ್ಚೆ ಮಾಡಿ ಪರಿಹಾರ ಸೂಚಿಸಲಾಗುವುದು ಎಂದರು.

ಇನ್ಫೋಸಿಸ್ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ತಿರುಮಲ್ ಆರ್ಚಿ ಮಾತನಾಡಿ, ಡಿಜಿಟಲ್ ಅನ್ವೇಷಣೆಯು ಶಿಕ್ಷಣ ಪ್ರಗತಿಗೆ ನೆರವಾಗಲಿದೆ. ಇನ್ಫೋಸಿಸ್ ಕೂಡ ಜಾಗತಿಕ ಮಟ್ಟದ ಡಿಜಿಟಲ್ ವೇದಿಕೆ ಸ್ಥಾಪನೆ ಮಾಡುತ್ತಿದ್ದು, ಇದರ ಮೂಲಕ 2025ರ ಒಳಗೆ 10 ಮಿಲಿಯನ್ ಜನರಿಗೆ ಶಿಕ್ಷಣ ಸೌಲಭ್ಯ ಕಲ್ಪಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

 ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಅಟಲ್ ಇನೋವೇಶನ್ ಮಿಷನ್ ನಿರ್ದೇಶಕ ಡಾ. ಚಿಂತನ್ ವೈಷ್ಣವ್, ಕೆಟಿಎಸ್‌ನ ನಿರ್ದೇಶಕಿ ಮೀನಾ ನಾಗರಾಜ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net