

ಮೈಸೂರು: ಮಹಾರತ್ನ ಟ್ರಸ್ಟ್‌ನ ವತಿಯಿಂದ ಕನ್ನಡೋತ್ಸವ ಹಾಗೂ ಕನ್ನಡ ಸಾಹಿತ್ಯ ರತ್ನ ಪುರಸ್ಕಾರ ಕಾರ್ಯಕ್ರಮವನ್ನು ಜಗನ್ಮೋಹನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮೇಯರ್ ಶಿವಕುಮಾರ್ ಮಾತನಾಡಿ, ಮೈಸೂರು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿ. ಕಲೆ, ಸಂಸ್ಕೃತಿ, ಶಿಕ್ಷಣಕ್ಕೆ ತವರೂರು. ಮಹಾರಾಜರ ಕಾಲದಿಂದಲೂ ಕಲೆ, ಸಾಹಿತ್ಯ ಹಾಗೂ ಸಂಗೀತಕ್ಕೆ ವಿಶೇಷವಾದ ಕೊಡುಗೆ ನೀಡುತ್ತಾ ಬಂದಿದೆ. ಅಂತಹ ಪರಂಪರೆಯನ್ನು ಹೊಂದಿರುವ ಮೈಸೂರು ಕಲೆಗಳ ನಾಡು ಎಂದರು.
ಸಾಹಿತ್ಯ ರತ್ನ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದ ವಿದ್ವಾನ್ ಸುರೇಶ್ ಅವರು, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕಲೆಯ ವಿವಿಧ ಪ್ರಕಾರಗಳು ಮತ್ತೆ ಪ್ರಯೋಗಿಸಬೇಕು. ಅದುವೇ ಅವುಗಳ ಜೀವಂತಿಕೆಯ ಲಕ್ಷಣ. ಎಂದೆಂದಿಗೂ ಮರೆಯಲಾಗದ ಭಾವನೆ ನೆನಪಿಸುತ್ತವೆ ಎಂದು ಅಭಿಪ್ರಾಯಿಸಿದರು.
ಜಾನಪದ ವಿದ್ವಾಂಸ ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಕಲೆಗಳ ಮೂಲ ತಾಯಿ ಬೇರಾದ ಜಾನಪದ ಸಾಹಿತ್ಯ ಎಂದೆಂದಿಗೂ ಜೀವಂತವಾದ ಸಾಂಸ್ಕೃತಿಕ ಕಲೆ. ಈ ಕಲೆಯನ್ನು ಇಂದಿನ ಯುವಪೀಳಿಗೆ ಉಳಿಸಿ, ಬೆಳೆಸಬೇಕೆಂದು ಕರೆ ನೀಡಿದರು.
ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಿ.ವಿ.ಪಾರ್ಥಸಾರಥಿ ಮಾತನಾಡಿದರು. ಸುಗಮ ಸಂಗೀತ ಗಾಯಕರಾದ ರಾಜೇಶ್ ಪಡಿಯಾರ್, ರಶ್ಮಿ ಹಿರೇಮಗಳೂರು, ಮೈಸೂರು ಮಹಾಲಿಂಗು, ದಿವ್ಯ, ಸಮಾಜ ಸೇವಕರಾದ ಡಾ.ರಘುರಾಂ ವಾಜಪೇಯಿ, ಚಂದ್ರಶೇಖರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮುಂತಾದವರು ಉಪಸ್ಥಿತರಿದ್ದರು.