

ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಪಿಂಚಣಿ ಪಾವತಿಗೂ ದುಡ್ಡಿಲ್ಲ. ಇದುವೇ ವಿವಿ ನಿರ್ವಹಣೆಗೆ ಕಂಟಕವಾಗಿ ಪರಿಣಮಿಸಿದೆ. ಸರ್ಕಾರವೇ ನೇರವಾಗಿ ಪಿಂಚಣಿ ಪಾವತಿ ಮಾಡಿದರೆ ಮಾತ್ರ ಈ ಸಮಸ್ಯೆ ಶಾಶ್ವತ ಪರಿಹಾರ ದೊರೆಯಲಿದೆ.
ಇದು ಭಾರತ ದೇಶದ 6ನೇ ಮತ್ತು ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ವಿಶ್ವವಿದ್ಯಾಲಯ. ಹಾಗೆಯೇ ಬ್ರಿಟಿಷರ ಭಾರತದ ಸರಹದ್ದಿನ ಹೊರಗೆ ಸ್ಥಾಪಿತವಾದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹಿರಿಮೆ ಇದೆ.
ಉದಾರವಾದಿ ಹಾಗೂ ದೂರದೃಷ್ಟಿಯುಳ್ಳ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಯತ್ನದ ಫಲವಾಗಿ ಕಣ್ತೆರೆದ ಈ ವಿವಿ ಶತಮಾನೋತ್ಸವ ಕಂಡಿದೆ. ಆದರೀಗ ಪೆನ್ಷನ್ ಕೊಡಲು ಹಣವಿಲ್ಲದಂತಹ ದಯನೀಯ ಸ್ಥಿತಿಗೆ ಸಿಲುಕಿಕೊಂಡಿರುವುದೇ ಅಚ್ಚರಿ..!
ಪ್ರತಿ ತಿಂಗಳೂ ನಿವೃತ್ತ ಬೋಧಕ, ಬೋಧಕೇತರರಿಗೆ ಪಿಂಚಣಿ ಕೊಡಬೇಕು. ಆದರೀಗ ಇದುವೇ ಸವಾಲಿನ ಕೆಲಸವಾಗಿದೆ. ಹೇಗೋ ಮಾಡಿ ಸರಿದೂಗಿಸಿಕೊಂಡು ಹೋಗಲು ವಿವಿ ಒದ್ದಾಡುತ್ತಿದೆ.
ಆದರೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗುವುದು ನಿಶ್ಚಿತ ಎಂದು ವಿವಿ ಮೂಲಗಳು ತಿಳಿಸಿವೆ. ಪಿಂಚಣಿದಾರರ ಸಂಖ್ಯೆ ಹೆಚ್ಚಾಗಿದ್ದರಿಂದ ಪಿಂಚಣಿಗೆ ಭರಿಸುವ ಮೊತ್ತವೂ ಏರಿಕೆಯಾಗುತ್ತಿದೆ. ಪಿಂಚಣಿ ನಿಧಿ ಸಹ ಬರಿದಾಗಿದೆ. ಇದು ವಿವಿ ಹಣಕಾಸು ಪರಿಸ್ಥಿತಿ ಕೈಮೀರುತ್ತಿರುವುದಕ್ಕೆ ಸಾಕ್ಷಿ ಎನಿಸಿದೆ.
ಸದ್ಯಕ್ಕೆ ವಿವಿಯ 1822 ನಿವೃತ್ತರರು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಪಿಂಚಣಿದಾರರ ಸಂಖ್ಯೆ 1881ಕ್ಕೆ ಏರಿಕೆಯಾಗಲಿದೆ. 21 ಬೋಧಕ, 38 ಬೋಧಕೇತರ ಸೇರಿದಂತೆ 59 ಉದ್ಯೋಗಿಗಳು ನಿವೃತ್ತರಾಗಲಿದ್ದಾರೆ. ಆದ್ದರಿಂದ ಪಿಂಚಣಿ, ಪಿಂಚಣಿ ಸೌಲಭ್ಯಗಳ ಬಾಬ್ತಿಗಾಗಿ 157.54 ಕೋಟಿ ರೂ. ಬೇಕಾಗಲಿದೆ.
ಆದರೆ, ಪಿಂಚಣಿ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಿಕೊಂಡು ಬಂದಿರುವ ರಾಜ್ಯ ಸರ್ಕಾರವು, ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಈ ಆರ್ಥಿಕ ಹೊರೆಯನ್ನು ಮೈವಿವಿಗೆ ವರ್ಗಾವಣೆ ಮಾಡಿ ಅದು ಬಚಾವ್ ಆಗಿದೆ. ಇದುವೇ ಸಮಸ್ಯೆಗೆ ಮೂಲವಾಗಿದೆ.
ರಾಜ್ಯ ಸರ್ಕಾರವು 2025-26ನೇ ಆರ್ಥಿಕ ಸಾಲಿಗೆ ಪಿಂಚಣಿ ಅನುದಾನ 157.54 ಕೋಟಿ ರೂ. ಕೊಡಬೇಕಿತ್ತು. ಆದರೆ, ಅದು ಬರೀ 50 ಕೋಟಿ ರೂ. ನೀಡಿ ಕೈತೊಳೆದುಕೊಂಡಿದೆ. ಬರೋಬ್ಬರಿ 107 ಕೋಟಿ ರೂ. ಹೊರೆ ವಿವಿ ಮೇಲೆಯೇ ಬಿದ್ದಿದೆ.
ಸರ್ಕಾರ ಪೂರ್ಣ ಪ್ರಮಾಣದ ಹಣ ಕೊಟ್ಟಿದ್ದರೆ 18 ಲಕ್ಷ ರೂ. ಮಾತ್ರ ಕೊರತೆಯಾಗುತ್ತಿತ್ತು. ಅದನ್ನು ಸುಲಭವಾಗಿ ಸರಿದೂಗಿಸಿಕೊಳ್ಳಬಹುದಿತ್ತು. ಆದರೀಗ ಶೇ.35ರಷ್ಟು ಹಣ ಬಿಡುಗಡೆ ಮಾಡಿ ಕೈಎತ್ತಿದೆ. ಉಳಿಕೆ ಹಣವನ್ನು ಹೇಗೆ ಹೊಂದಿಸುವುದು ಎಂಬುದೇ ವಿವಿಗೆ ದೊಡ್ಡ ಟೆನ್ಷನ್ ಆಗಿದೆ.
ಪಿಂಚಣಿ ಅನುದಾನ ಕಡಿತದಿಂದ ವಿವಿ ಬಜೆಟ್‌ನಲ್ಲೂ ದೊಡ್ಡ ಮಟ್ಟದ ಖೋತಾ ಆಗಿದೆ. ಇದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿಬಿಟ್ಟಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 295.59 ಕೋಟಿ ರೂ. ನಿರೀಕ್ಷಿತ ಆದಾಯವಾಗಿದ್ದು, 403.31 ಕೋಟಿ ರೂ. ನಿರೀಕ್ಷಿತ ವೆಚ್ಚವಾಗಿದೆ. 107.72 ಕೋಟಿ ರೂ. ಕೊರತೆ ಉಂಟಾಗಿದೆ. ರಾಜ್ಯ ಸರ್ಕಾರ ಪಿಂಚಣಿ ಅನುದಾನವನ್ನು ತಗ್ಗಿಸಿದ್ದರಿಂದಲೇ ಆಯವ್ಯಯದಲ್ಲಿ ದೊಡ್ಡ ಮೊತ್ತದ ಕೊರತೆ ಸೃಷ್ಟಿಯಾಗಿದೆ.
ಪಿಂಚಣಿಯೊಂದಿಗೆ ಕಾಯಂ ಸಿಬ್ಬಂದಿ ವೇತನ, ಅಭಿವೃದ್ಧಿ ಸೇರಿದಂತೆ ರಾಜ್ಯ ಸರ್ಕಾರದಿಂದ 184.68 ಕೋಟಿ ರೂ. ಮಾತ್ರ ಅನುದಾನ ಬರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಪೈಕಿ 127.68 ಕೋಟಿ ರೂ. ವೇತನಕ್ಕೆ ಹೋಗಲಿದೆ.
ಜತೆಗೆ, ವಿವಿ ಸ್ವಂತ ಆರ್ಥಿಕ ಮೂಲಗಳಿಂದ 108.50 ಕೋಟಿ ರೂ. ಸಂಗ್ರಹವಾಗಬಹುದು. ಆದರೆ, ವೆಚ್ಚದ ಪಟ್ಟಿ ದೊಡ್ಡದಿದೆ. ವಿವಿಧ ರೀತಿಯ ವೆಚ್ಚಗಳಿಗೆ 403.31 ಕೋಟಿ ರೂ. ಬೇಕಾಗಲಿದೆ. ವೆಚ್ಚ ಹೆಚ್ಚಾಗಿ ಆದಾಯ ಕಡಿಮೆಯಾಗಿರುವುದರಿಂದ ವಿವಿ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿಕೊಳ್ಳಲು ಕಾರಣವಾಗಿದೆ.
ವಿಶ್ವವಿದ್ಯಾಲಯ ವಿಭಜನೆಯಿಂದ ಮೈವಿವಿ ಆಂತರಿಕ ಸಂಪನ್ಮೂಲ ತೀವ್ರವಾಗಿ ಕುಸಿತವಾಗಿದೆ. ಮೈವಿವಿಯ ಸ್ನಾತಕೋತ್ತರ ಕೇಂದ್ರಗಳಾಗಿದ್ದ ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ಹೊಸ ವಿಶ್ವವಿದ್ಯಾಲಯ ರಚನೆಯಾಗಿವೆ. ಮೈವಿವಿ ಇದೀಗ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ.
ಇದರಿಂದ ಪ್ರವೇಶಾತಿ, ಸಂಯೋಜನೆ, ನೋಂದಣಿ ಸೇರಿದಂತೆ ವಿವಿಧ ಮೂಲಗಳಿಂದ ಬರುತ್ತಿದ್ದ ಆದಾಯವೂ ಕೈತಪ್ಪಿದೆ. ಇದರಿಂದ ಮೈವಿವಿ ಆರ್ಥಿಕವಾಗಿ ಬಡವಾಗಿದೆ. ಈ ಹಿಂದೆ ಹಳೇ ಮೈಸೂರಿನ ಭಾಗಶಃ ಅರ್ಧಪ್ರದೇಶದಷ್ಟು ಕಾರ್ಯವ್ಯಾಪ್ತಿ ಹೊಂದಿದ್ದ ಮೈವಿವಿಗೆ ಈ ರೀತಿಯ ಹಣಕಾಸಿನ ತೊಂದರೆ ಯಾವ ವರ್ಷವೂ ಎದುರಾಗಿರಲಿಲ್ಲ.
ಪಿಂಚಣಿ ಪಾವತಿ ತೊಂದರೆ ಕೇವಲ ಮೈವಿವಿಗೆ ಸೀಮಿತವಾಗಿಲ್ಲ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬೆಂಗಳೂರು ವಿವಿ, ಮಂಗಳೂರು ವಿವಿ ಸೇರಿದಂತೆ ರಾಜ್ಯದ ಬಹುತೇಕ ವಿವಿಗಳು ಈ ಸಮಸ್ಯೆಯಲ್ಲಿ ಸಿಲುಕಿಕೊಂಡಿವೆ.
ಅತ್ಯಂತ ಹಳೇ ವಿಶ್ವವಿದ್ಯಾಲಯವಾಗಿರುವುದರಿಂದ ಮೈವಿವಿಯಲ್ಲಿ ಪಿಂಚಣಿದಾರರು, ಅವರ ಕುಟುಂಬದವರ ಸಂಖ್ಯೆ ಅಧಿಕ. ಹೀಗಾಗಿ, ಇಲ್ಲಿ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.
ರಾಜ್ಯ ಸರ್ಕಾರವೇ ನೇರವಾಗಿ ಪಿಂಚಣಿದಾರರಿಗೆ ಪಿಂಚಣಿ, ಸೌಲಭ್ಯ ಕಲ್ಪಿಸಿಕೊಟ್ಟರೆ ಈ ಸಮಸ್ಯೆ ಪರಿಹಾರ ದೊರೆಯಲಿದೆ. ಸರ್ಕಾರಿ ನಿವೃತ್ತ ನೌಕರರಿಗೆ ಎಚ್‌ಆರ್‌ಎಂಎಸ್ ಮೂಲಕ ಪಿಂಚಣಿ ಕೊಡಲಾಗುತ್ತಿದೆ. ಅದೇ ರೀತಿ ಮೈವಿವಿ ಪಿಂಚಣಿದಾರರಿಗೂ ಈ ಸೌಲಭ್ಯ ವಿಸ್ತರಣೆ ಮಾಡಬೇಕು.
ಕುಲಪತಿ, ಮೈಸೂರು ವಿಶ್ವವಿದ್ಯಾಲಯ
ಪ್ರೊ.ಎನ್.ಕೆ.ಲೋಕನಾಥ್
ಪಿಂಚಣಿದಾರರ ಸಂಖ್ಯೆ ಹೆಚ್ಚಾಗಿದ್ದರಿಂದ ಪಿಂಚಣಿಗೆ ಭರಿಸುವ ಮೊತ್ತವೂ ಏರಿಕೆಯಾಗುತ್ತಿದೆ. ಜತೆಗೆ, ಸರ್ಕಾರದಿಂದ ಬರುವ ಪಿಂಚಣಿ ಅನುದಾನ ಕಡಿಮೆಯಾಗಿದೆ. ಸರ್ಕಾರವೇ ಪಿಂಚಣಿದಾರರಿಗೆ ನೇರವಾಗಿ ಪಿಂಚಣಿ ಭರಿಸಿದರೆ ಸಮಸ್ಯೆ ಬಗೆಹರಿಯಲಿದೆ.
ಇದರಿಂದ ಮೈವಿವಿ ಮೇಲಿನ ಹೊರೆ ಕಡಿಮೆಯಾಗಲಿದೆ. ಪ್ರತಿ ತಿಂಗಳು ಹಣ ಹೊಂದಿಸಲು ಪರದಾಡುವುದೂ ತಪ್ಪಲಿದೆ. ಆದರೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಅಲ್ಲಿಯವರೆಗೆ ಪರಿಹಾರ ಸಿಗುವುದು ಕಷ್ಟಕರ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.