

‘ದೇಶದ 2ನೇ ಮನೋವಿಜ್ಞಾನ ಅಧ್ಯಯನ ವಿಭಾಗ’ ಎಂಬ ಹಿರಿಮೆ ಹೊಂದಿರುವ ಮೈಸೂರು ವಿಶ್ವವಿದ್ಯಾಲಯದ ಮನೋವಿಜ್ಞಾನ ಅಧ್ಯಯನ ವಿಭಾಗಕ್ಕೆ ಇರುವುದು ಏಕೈಕ ಕಾಯಂ ಬೋಧಕರು!
ಶತಮಾನೋತ್ಸವ ಸಡಗರದಲ್ಲಿರುವ ಈ ವಿಭಾಗದ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಇದು. ಪೂರ್ಣಕಾಲಿಕ ಬೋಧಕರ ಕೊರತೆಯಿಂದ ಇದು ನಲುಗಿ ಹೋಗಿದ್ದು, ಅತಿಥಿ ಉಪನ್ಯಾಸಕರಿಂದಲೇ ಇದು ನಡೆಯುತ್ತಿದೆ. ಹೀಗಾಗಿ, ಶೈಕ್ಷಣಿಕ ಗುಣಮಟ್ಟ ನಿರೀಕ್ಷಿಸಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಿದೆ.
ತ್ವರಿತವಾಗಿ ಕಾಯಂ ಪ್ರಾಧ್ಯಾಪಕರನ್ನು ನೇಮಕ ಮಾಡಿ, ಈ ವಿಭಾಗಕ್ಕೆ ಕಾಯಕಲ್ಪ ನೀಡಬೇಕು. ಶೈಕ್ಷಣಿಕ, ಸಂಶೋಧನಾ ಚಟುವಟಿಕೆಯಲ್ಲಿ ಉತ್ಕೃಷ್ಟತೆ ಕಾಯ್ದುಕೊಳ್ಳಬೇಕಿದೆ ಎಂಬುದು ವಿದ್ಯಾರ್ಥಿಗಳ, ಹಳೇ ವಿದ್ಯಾರ್ಥಿಗಳ, ನಿವೃತ್ತ ಪ್ರಾಧ್ಯಾಪಕರ ಆಗ್ರಹವಾಗಿದೆ.
ಈ ವಿಭಾಗಕ್ಕೆ ಒಟ್ಟು 8 ಬೋಧಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಏಳು ಹುದ್ದೆಗಳು ಖಾಲಿ ಹೊಡೆಯುತ್ತಿವೆ. ಒಂದೇ ಹುದ್ದೆಯಲ್ಲಿ ಕಾಯಂ ಬೋಧಕರಿದ್ದಾರೆ. ಅವರೇ ಪ್ರಾಧ್ಯಾಪಕರು, ಅವರೇ ವಿಭಾಗದ ಮುಖ್ಯಸ್ಥರು. ಅವರೇ ಬಹುಮುಖಿ ಪಾತ್ರ ನಿರ್ವಹಿಸಬೇಕು. ‘ಒನ್ ಮ್ಯಾನ್ ಆರ್ಮಿ’ ರೀತಿಯಲ್ಲಿ ಇವರು ತಮ್ಮ ಹೊಣೆಗಾರಿಕೆಯೊಂದಿಗೆ ಉಳಿದ ಎಲ್ಲ ಶೈಕ್ಷಣಿಕ, ಆಡಳಿತ ಸೇರಿದಂತೆ ವಿವಿಧ ಕರ್ತವ್ಯ ನಿರ್ವಹಿಸಬೇಕಿದೆ. ಈ ಕೊರತೆಯೇ ವಿಭಾಗದ ಶೈಕ್ಷಣಿಕ ಪ್ರಗತಿಗೆ ತೊಡಕಾಗಿದೆ.
ಸದ್ಯಕ್ಕೆ ಇಡೀ ವಿಭಾಗವು ಅತಿಥಿ ಉಪನ್ಯಾಸಕರ ಮೇಲೆಯೇ ನಿಂತಿದೆ. 4 ಅರೆಕಾಲಿಕ ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅತಿಥಿಗಳು ಅತಿಥಿಗಳೇ. ಇವರು ಪೂರ್ಣಕಾಲಿಕ ಪ್ರಾಧ್ಯಾಪಕರಂತೆ ಕೆಲಸ ಮಾಡಲಾಗದು. ಇವರಿಂದ ಈ ಕೆಲಸವನ್ನೂ ನಿರೀಕ್ಷಿಸಲಾಗದು. ಶೈಕ್ಷಣಿಕ ಗುಣಮಟ್ಟಕ್ಕೆ ಇದು ಪೆಟ್ಟು ಕೊಡಲಿದೆ ಎಂಬುದು ವಿದ್ಯಾರ್ಥಿಗಳು ಅಳಲು.
ಇದು ದೇಶದಲ್ಲೇ ಪ್ರತಿಷ್ಠಿತ ವಿಭಾಗ. ಇಲ್ಲಿ ಕಲಿತವರು ದೇಶ-ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದೇಶಿಯ ವಿದ್ಯಾರ್ಥಿಗಳನ್ನೂ ಇದು ಆಕರ್ಷಿಸಿದೆ. ಇಲ್ಲಿ ಹಾಲಿ 6 ವಿದೇಶಿ ಪ್ರಜೆಗಳು ಕಲಿಯುತ್ತಿದ್ದಾರೆ. ಕೇರಳ, ಬೆಂಗಳೂರು ಸೇರಿದಂತೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ ಬಂದಿದ್ದಾರೆ. ಸೈಕಾಲಜಿ ಎಂ.ಎಸ್ಸಿಯ ಪ್ರಥಮ, ದ್ವಿತೀಯ ವರ್ಷದಲ್ಲಿ 75 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೀಗ, ಪ್ರಾಧ್ಯಾಪಕರ ಅಭಾವದಿಂದ ಈ ವಿಭಾಗವು ಶೈಕ್ಷಣಿಕವಾಗಿ ಬಡವಾಗಿದೆ.
ಮೈಸೂರು ವಿವಿಗೆ 109 ವರ್ಷ, ಈ ವಿಭಾಗಕ್ಕೆ 100 ವರ್ಷ ಸಂಭ್ರಮ. ಮೈವಿವಿ 1916ರಲ್ಲಿ ಸ್ಥಾಪನೆಯಾದ ಬಳಿಕ ಇದು 8 ವರ್ಷದ ಬಳಿಕ ಕಣ್ತೆರೆದಿದೆ. 1924ರಲ್ಲಿ ಸ್ಥಾಪನೆಯಾದ ಈ ವಿಭಾಗವು 2024-25ನೇ ಸಾಲಿನಲ್ಲಿ ನೂರು ವರ್ಷ ಪೂರ್ಣಗೊಳಿಸಿರುವುದರಿಂದ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಮೊದಲ ಮನೋವಿಜ್ಞಾನ ವಿಭಾಗ ಸ್ಥಾಪಿತವಾಗಿತ್ತು. ಅನಂತರ 2ನೇ ಮನೋವಿಜ್ಞಾನ ಅಧ್ಯಯನ ವಿಭಾಗವು ಮೈವಿವಿಯಲ್ಲಿ ಪ್ರತಿಷ್ಠಾನಗೊಂಡಿತು.
ಹೀಗಾಗಿ, ಇದು ದೇಶದಲ್ಲೇ ಅತ್ಯಂತ ಹಳೇ ಮನೋವಿಜ್ಞಾನ ಅಧ್ಯಯನ ವಿಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಭಾಗವು ಮೈಸೂರಿಗೆ ಆಕಾಶವಾಣಿಯನ್ನು ಪರಿಚಯಿಸಿದ ಎಂ.ವಿ.ಗೋಪಾಲಸ್ವಾಮಿ ಅವರ ಕೊಡುಗೆ. ಸ್ಥಾಪನೆಯಾದ ದಿನದಿಂದ ಮನೋವಿಜ್ಞಾನ ಕ್ಷೇತ್ರಕ್ಕೆ ಅನನ್ಯ ಸೇವೆ ಕೊಟ್ಟಿದೆ.
ಇದು ಮೊದಲು ನಗರದ ಮಹಾರಾಜ ಕಾಲೇಜಿನಲ್ಲಿ ಕಾರ್ಯಾರಂಭಗೊಂಡಿತು. ರಾಜ್ಯದಲ್ಲೇ ಮೊದಲ ಬಾರಿಗೆ ಮನೋವಿಜ್ಞಾನ ಪಠ್ಯಕ್ರಮ ಪರಿಚಯಿಸಿದ ಕೀರ್ತಿ ಮೈವಿವಿಗೆ ಸಲ್ಲುತ್ತದೆ. ಮನೋವಿಜ್ಞಾನ ಸ್ನಾತಕ, ಸ್ನಾತಕೋತ್ತರ ಪದವಿ ನೀಡಲಾಗುತ್ತಿತ್ತು. ಇದಕ್ಕಾಗಿ ಮಹಾರಾಜ ಕಾಲೇಜಿನಲ್ಲೇ ಮನೋವಿಜ್ಞಾನ ಲ್ಯಾಬ್ ನಡೆಸಲಾಗುತ್ತಿತ್ತು.
1960ರವರೆಗೆ ಇದೇ ಕಾಲೇಜಿನಲ್ಲಿ ನಡೆಯುತ್ತಿತ್ತು. ಬಳಿಕ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರತ್ಯೇಕಗೊಳಿಸಲಾಯಿತು. ಬಳಿಕ ಮೈವಿವಿಯಿಂದ ಹೊಸದಾಗಿ ಸ್ಥಾಪನೆಗೊಂಡ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗ ಆಗಿ ರೂಪಾಂತರಗೊಂಡಿತು. ಗಂಗೋತ್ರಿಯಲ್ಲೇ ಇದು ಹಿರಿಯಣ್ಣನಂತಿದೆ.
ಇಲ್ಲಿ ಕಲಿತ ವಿದ್ಯಾರ್ಥಿಗಳು ಭಾರತೀಯ ಸೇನೆ, ಕ್ರೀಡೆ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ವಿಧಿವಿಜ್ಞಾನ ಪ್ರಯೋಗಾಲಯ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಿದ್ದಾರೆ. ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ, ಸಾರ್ವಜನಿಕ ಸೇವೆ, ರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರಕವಿ ಕುವೆಂಪು, ನಿವೃತ್ತ ಕುಲಪತಿ ಪ್ರೊ.ತಿಮ್ಮಪ್ಪ, ಪ್ರೊ.ಎಚ್.ಎನ್.ಮೂರ್ತಿ, ಪ್ರೊ.ವಿನೋದ ಮೂರ್ತಿ, ಪ್ರೊ.ಇಂದಿರಾ ಜಯಪ್ರಕಾಶ್, ಪ್ರೊ.ಅಚಲಾ ಉಮಾಪತಿ, ಪ್ರೊ.ಪಿ.ನಟರಾಜ್, ಐಐಎಂ ಷಣ್ಮುಗಂ, ಎಸ್.ರಾಮಚಂದ್ರ, ಗುಜರಾತ್ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನ್ಯಾಯಮನೋವಿಜ್ಞಾನ ಪ್ರಾಧ್ಯಾಪಕ ಪ್ರೊ.ಎಸ್.ಎಲ್.ವಯಾ, ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾಜಿ ನಿರ್ದೇಶಕ ಮುತ್ತಯ್ಯ ಇನ್ನಿತರರು ಈ ವಿಭಾಗದ ಹಳೇ ವಿದ್ಯಾರ್ಥಿಗಳು. ಇಲ್ಲಿ ಕಲಿತ ಅನೇಕ ಹಳೆಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಕೆಲಸ ಹಾಗೂ ಸಂಶೋಧನೆಯಲ್ಲಿ ಸಕ್ರಿಯವಾಗಿದ್ದಾರೆ.
ದೇಶದಲ್ಲಿ ಮಾನಸಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮುಂದಾಳತ್ವದ ಕೆಲಸವನ್ನು ವಿಭಾಗ ಹಿಂದಿನಿಂದಲೂ ನಿರ್ವಹಿಸುತ್ತಿದೆ. ಮನೋವಿಜ್ಞಾನದಲ್ಲಿ ಸಾವಿರರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪ್ರದಾನ ಮಾಡಿದೆ. ಹಲವು ಮಾನಸಿಕ ಪರೀಕ್ಷೆ, ಸಾಮರ್ಥ್ಯ ಪರೀಕ್ಷೆ ಮತ್ತು ಉಪಕರಣಗಳನ್ನು ಅಭಿವೃದ್ಧಿಪಡಿಸಿ, ಪ್ರಮಾಣೀಕರಿಸಿದೆ. ಈ ಪರಿಕರಗಳನ್ನು ಶೈಕ್ಷಣಿಕ ಸಂಶೋಧನೆಯಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತಿದೆ. ಪ್ರಾಯೋಗಿಕವಾಗಿಯೂ ಅನೇಕ ಕೊಡುಗೆ ಇದು ಕೊಟ್ಟಿದೆ.
ನಮ್ಮ ವಿಭಾಗಕ್ಕೆ ದೇಶದಲ್ಲೇ ಉತ್ತಮ ಹೆಸರಿದೆ. ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇಲ್ಲಿಗೆ ಕಲಿಯಲು ಬರುತ್ತಾರೆ. ಆದರೆ, ನಮ್ಮ ವಿಭಾಗದಲ್ಲಿ ಕಾಯಂ ಬೋಧಕರ ಕೊರತೆ ಇದೆ. ನಾನೊಬ್ಬನೇ ಕಾಯಂ ಪ್ರಾಧ್ಯಾಪಕರ. ಎಲ್ಲ ಜವಾಬ್ದಾರಿಯನ್ನು ನಾನೊಬ್ಬನೇ ನಿರ್ವಹಿಸಬೇಕಿದೆ. ಪೂರ್ಣಕಾಲಿಕ ಉಪನ್ಯಾಸಕರನ್ನು ನೀಡಿದರೆ ಇನ್ನಷ್ಟು ಶೈಕ್ಷಣಿಕ ಅಭಿವೃದ್ಧಿಗೆ ಮಾಡಲು ಅನುಕೂಲವಾಗುತ್ತದೆ. ಪ್ರೊ.ಸಂಪತ್‌ಕುಮಾರ್, ಮುಖ್ಯಸ್ಥರು, ಮೈವಿವಿ ಮನೋವಿಜ್ಞಾನ ಅಧ್ಯಯನ ವಿಭಾಗ. ----- ಸರ್ಕಾರವು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಿ ಪೂರ್ಣಕಾಲಿಕ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿದರೆ ಶೈಕ್ಷಣಿಕ ಪ್ರಗತಿ ವೇಗಗೊಳ್ಳುತ್ತದೆ. ಹೆಚ್ಚು ಸಂಶೋಧನೆಗಳಿಗೆ ಕಾರಣವಾಗುತ್ತದೆ. ಬದಲಾಗುತ್ತಿರುವ ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಕ್ರೀಡಾ ಮನೋವಿಜ್ಞಾನ, ನ್ಯಾಯ ಮನೋವಿಜ್ಞಾನ, ಸೈಬರ್ ಸೈಕಾಲಜಿಯಂತಹ ಹೊಸ ಶಾಖೆಗಳನ್ನು ಪರಿಚಯಿಸಬೇಕು. ಇದು ಮುಂದಿನ ದಿನಗಳಲ್ಲಿ ಮನೋವಿಜ್ಞಾನದ ಪ್ರಯೋಜನವನ್ನು ಸಾಮಾಜಿಕವಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಡಾ.ಎಚ್.ಕೆ. ಮಂಜು, ಕಾರ್ಯದರ್ಶಿ, ಮೈವಿವಿ ಮನೋವಿಜ್ಞಾನ ಹಿರಿಯ ವಿದ್ಯಾರ್ಥಿಗಳ ಸಂಘ