

ಮೈಸೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ವಿಶ್ವವಿದ್ಯಾಲಯವು 2025-26ನೇ ಸಾಲಿನಲ್ಲಿ ಬರೋಬ್ಬರಿ 107 ಕೋಟಿ ರೂ.ಕೊರತೆಯ ಆಯವ್ಯಯ ಮಂಡಿಸಿದೆ.
ಮೈವಿವಿ ಕಾರ್ಯಸೌಧ ಕ್ರಾಫರ್ಡ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಅವರು ಬಜೆಟ್ ಮಂಡಿಸಿ, ಅನುಮೋದನೆ ಪಡೆದುಕೊಂಡರು.
ಪ್ರಸ್ತಕ ಆರ್ಥಿಕ ವರ್ಷದಲ್ಲಿ 295.59 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. 403.31 ಕೋಟಿ ರೂ.ವೆಚ್ಚವಾಗಿ 107.72 ಕೋಟಿ ರೂ.ಕೊರತೆ ಉಂಟಾಗಿದೆ.
ಪ್ರಸ್ತಕ ಸಾಲಿಗೆ ರಾಜ್ಯ ಸರ್ಕಾರವು ಪಿಂಚಣಿ ಅನುದಾನ 157.54 ಕೋಟಿ ರೂ.ಸಂಪೂರ್ಣವಾಗಿ ಬಿಡುಗಡೆ ಮಾಡಿದರೆ 18 ಲಕ್ಷ ರೂ.ಮಾತ್ರ ಕೊರತೆಯಾಗುತ್ತಿತ್ತು. ಆದರೆ, 50 ಕೋಟಿ ರೂ.ನೀಡಿರುವುದರಿಂದ ದೊಡ್ಡ ಮೊತ್ತ ಕೊರತೆ ಉಂಟಾಗಿದೆ.
ಕಾಯಂ ಸಿಬ್ಬಂದಿ ವೇತನ, ಪಿಂಚಣಿ ಅನುದಾನದ 177.68 ಕೋಟಿ ರೂ.ಮಾತ್ರ ಸರ್ಕಾರದಿಂದ ಮಂಜೂರಾಗಿದೆ. ಇದರಲ್ಲಿ 127.68 ಕೋಟಿ ರೂ. ವೇತನಾನುದಾನ, 50 ಕೋಟಿ ರೂ.ಪಿಂಚಣಿ ಅನುದಾನ ಸೇರಿದೆ. ಅಭಿವೃದ್ಧಿ ಅನುದಾನದಲ್ಲಿ 3 ಕೋಟಿ ರೂ., ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ 4 ಕೋಟಿ ರೂ. ಸರ್ಕಾರದಿಂದ ಬರುವ ನಿರೀಕ್ಷೆ ಇದೆ. ಒಟ್ಟಾರೆ 184.68 ಕೋಟಿ ರೂ.ಆದಾಯವಾಗಿ ಪರಿಗಣಿಸಲಾಗಿದೆ.
ಆಂತರಿಕ ಸಂಪನ್ಮೂಲಗಳಾದ ಪ್ರವೇಶ, ನೋಂದಣಿ, ಸಂಯೋಜನೆ, ಇನ್ನಿತರ ಶುಲ್ಕಗಳಿಂದ 45 ಕೋಟಿ ರೂ., ಸ್ಕೀಂ ಬಿ ಕೋರ್ಸ್‌ಗಳಿಂದ 3 ಕೋಟಿ ರೂ., ಪರೀಕ್ಷಾ ಚಟುವಟಿಕೆಗಳಿಂದ 50 ಕೋಟಿ ರೂ., ವಿವಿಧ ಆಸ್ತಿಗಳಿಂದ 3.50 ಕೋಟಿ ರೂ., ಇತರ ಮೂಲಗಳಿಂದ 7 ಕೋಟಿ ರೂ. ನಿರೀಕ್ಷಿಸಲಾಗಿದೆ. ಒಟ್ಟಾರೆಯಾಗಿ 108.50 ಕೋಟಿ ರೂ. ಆಂತರಿಕ ನಿರೀಕ್ಷಿತ ಆದಾಯವಾಗಿದೆ. 2024-25ನೇ ಸಾಲಿನ ಬಜೆಟ್ ಅಂದಾಜಿನ ಅನ್ವಯ 2.40 ಕೋಟಿ ರೂ.ಉಳಿಯುವ ಸಂಭವ ಇದೆ.
109ನೇ ವರ್ಷಕ್ಕೆ ಕಾಲಿಟ್ಟಿರುವ ಮೈವಿವಿಯಲ್ಲಿ 1,822 ಜನರು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಪಿಂಚಣಿದಾರರ ಸಂಖ್ಯೆ 1,881ಕ್ಕೆ ಏರಿಕೆಯಾಗಲಿದೆ. 21 ಬೋಧಕ, 38 ಬೋಧಕೇತರ ಸೇರಿದಂತೆ 59 ಉದ್ಯೋಗಿಗಳು ನಿವೃತ್ತರಾಗಲಿದ್ದಾರೆ. ಆದ್ದರಿಂದ ಪಿಂಚಣಿ, ಪಿಂಚಣಿ ಸೌಲಭ್ಯಗಳ ಬಾಬ್ತಿಗಾಗಿ 157.54 ಕೋಟಿ ರೂ. ಬೇಕಾಗಲಿದೆ. ವೇತನ ಭತ್ಯೆ, ಪಿಂಚಣಿ, ಸಾಮಾನ್ಯ ಆಡಳಿತ ವೆಚ್ಚ, ಇನ್ನುಳಿದ ನಿರೀಕ್ಷಿತ ವೆಚ್ಚಗಳನ್ನು ಯೋಜನೇತರ ವೆಚ್ಚಗಳ ಅಡಿ ಪರಿಣಿಸಿ 403.31 ಕೋಟಿ ರೂ.ನಿಗದಿ ಪಡಿಸಲಾಗಿದೆ.
ವಿವಿ ಇನ್ನುಳಿದ 17 ಖಾತೆ ಸ್ವೀಕೃತಿ, ಬಡ್ಡಿ ಮೊತ್ತ ಸೇರಿ 46.32 ಕೋಟಿ ರೂ.ಆದಾಯ, 39.05 ಕೋಟಿ ರೂ.ವೆಚ್ಚ ನಿಗದಿಪಡಿಸಲಾಗಿದೆ. ಹಾಗೆಯೇ ವಿವಿಗೆ ಈ ಖಾತೆಗಳ ಆದಾಯ, ವೆಚ್ಚಗಳು ಯಾವುದೇ ಆರ್ಥಿಕ ಹೊರೆಗೆ ಆಗುವುದಿಲ್ಲ ಎಂದು ಹಣಕಾಸು ಅಧಿಕಾರಿ ರೇಖಾ ತಿಳಿಸಿದರು.
ಕ್ರೀಡಾ ಬಜೆಟ್‌ನಲ್ಲಿ ಭಾರಿ ಕಡಿತ ಮಾಡಲಾಗಿದೆ. ಈ ಸಲ 25 ಲಕ್ಷ ರೂ.ನಿಗದಿಪಡಿಸಲಾಗಿದೆ. ಈ ಹಿಂದೆ ಇದು 60ರಿಂದ 75 ಲಕ್ಷ ರೂ.ಇತ್ತು. ಕ್ರೀಡಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು 5,000ರಿಂದ 3,000 ರೂ.ಗೆ ಇಳಿಕೆ ಮಾಡಲಾಗಿದೆ. ಈಜುಕೊಳದ ನೀರಿನ ಶುದ್ಧೀಕರಣಕ್ಕೆ ಬಳಕೆ ಮಾಡುವ ಕೆಮಿಕಲ್ ವೆಚ್ಚವನ್ನು 5 ಲಕ್ಷ ರೂ.ದಿಂದ 3 ಲಕ್ಷ ರೂ.ಗೆ ತಗ್ಗಿಸಲಾಗಿದೆ. ಇದು ಐದಾರು ತಿಂಗಳಿಗೆ ಮಾತ್ರ ಸಾಕಾಗಲಿದೆ ಎಂದು ದೈಹಿಕ ಶಿಕ್ಷಣ ಡೀನ್ ಡಾ.ಸಿ.ವೆಂಕಟೇಶ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು, ಇಷ್ಟೇ ಬಜೆಟ್‌ನಲ್ಲಿ ಮಾಡಿ. ವಿವಿ ಒಂದು ಜಿಲ್ಲೆಗೆ ಸಿಮೀತವಾಗಿರುವುದರಿಂದ ಎಲ್ಲ ಕ್ರೀಡಾ ಚಟುವಟಿಕೆ ಕಡಿಮೆ ಮಾಡಿ ಎಂದು ಸೂಚಿಸಿದರು.
ಪಿಂಚಣಿ ಕೊಡಲು ದುಡ್ಡಿಲ್ಲ. ಮಾರ್ಚ್ ಹೇಗೋ ಸರಿದೂಗಿಸಲಾಗಿದೆ. ಏಪ್ರಿಲ್‌ನಿಂದ ಸಮಸ್ಯೆ ಎದುರಾಗಲಿದೆ ಎಂದು ಕುಲಪತಿ ಪ್ರೊ.ಲೋಕನಾಥ್ ಆತಂಕ ವ್ಯಕ್ತಪಡಿಸಿದರು.
ಪಿಂಚಣಿದಾರರ ಸಂಖ್ಯೆ ಹೆಚ್ಚಾಗಿದ್ದರಿಂದ ಪಿಂಚಣಿಗೆ ಭರಿಸುವ ಮೊತ್ತವೂ ಏರಿಕೆಯಾಗುತ್ತಿದೆ. ಪಿಂಚಣಿ ನಿಧಿಯೂ ಭರಿದಾಗಿದೆ. ಕಾಯಂ ಬೋಧಕರು ನೇಮಕವಾದರೆ ಅವರಿಗೆ ಸರ್ಕಾರವೇ ಸಂಬಳ ಕೊಡಲಿದೆ. ಅವರ ನೇಮಕಾತಿ ಆಗದಿದ್ದರಿಂದ ಅತಿಥಿ ಉಪನ್ಯಾಸರಿಗೆ ವಿವಿಯಿಂದಲೇ ವೇತನ ಕೊಡುವಂತಾಗಿದೆ. ಇದು ಸಹ ಹೊರೆಯಾಗಿದೆ ಎಂದು ಹೇಳಿದರು.
ಸರ್ಕಾರವೇ ಪಿಂಚಣಿದಾರರಿಗೆ ನೇರವಾಗಿ ಪಿಂಚಣಿ ಭರಿಸಿದರೆ ಸಮಸ್ಯೆ ಬಗೆಹರಿಯಲಿದೆ. ಇಲ್ಲವಾದರೆ ವಿವಿ ನಡೆಸುವುದೇ ಕಷ್ಟಕರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.