

ಮೈಸೂರು: ಕ್ಯೂ.ಎಸ್. ವರ್ಲ್ಡ್ ಯೂನಿವರ್ಸಿಟಿ ರ‌್ಯಾಂಕಿಂಗ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯವು ಎಂಟು ದಕ್ಷಿಣ ಏಷ್ಯಾ ದೇಶಗಳ ನಡುವೆ 110ನೇ ಸ್ಥಾನ ಪಡೆದಿದೆ.
ಕ್ಯು.ಎಸ್. ಸಂಸ್ಥೆಯು ಪ್ರತಿ ವರ್ಷವೂ ಜಾಗತಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ‌್ಯಾಂಕಿಂಗ್ ನೀಡುತ್ತಿದ್ದು, ರ‌್ಯಾಂಕಿಂಗ್ ಪ್ರಕಟಿಸಿದೆ. ಶೈಕ್ಷಣಿಕ ಸಹವರ್ತಿಗಳ ವಿಮರ್ಶೆ, ಅಧ್ಯಾಪಕ-ವಿದ್ಯಾರ್ಥಿ ಅನುಪಾತ, ಸಂಶೋಧನಾ ಉಲ್ಲೇಖ, ಉದ್ಯೋಗದಾತರು ಹೊಂದಿರುವ ಅಭಿಪ್ರಾಯ, ವಿದೇಶಿ ವಿದ್ಯಾರ್ಥಿಗಳ ಅನುಪಾತ ಮತ್ತು ವಿದೇಶಿ ಅಧ್ಯಾಪಕರ ಅನುಪಾತ ಎಂಬ ಆರು ಅಂಶಗಳನ್ನು ಆಧರಿಸಿ ಈ ರ‌್ಯಾಂಕ್ ನೀಡಲಾಗುತ್ತದೆ.
‘ಮೈಸೂರು ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ, ಉದ್ಯೋಗ ಸೃಷ್ಟಿಯ ಆಯಾಮದಲ್ಲಿ ಉತ್ತಮ ಸಾಧನೆ ಮಾಡಿ ಈ ಶ್ರೇಣಿಯನ್ನು ಪಡೆದಿದೆ. ಕಾಯಂ ಅಧ್ಯಾಪಕರ ಕೊರತೆ, ಇನ್ನಿತರ ಮಿತಿಗಳ ನಡುವೆಯೂ ಮೈವಿವಿ 110ನೇ ಸ್ಥಾನ ಪಡೆದಿರುವುದು ಅಭಿಮಾನದ ಸಂಗತಿಯಾಗಿದೆ’ ಎಂದು ಹಂಗಾಮಿ ಕುಲಪತಿ ಪ್ರೊ.ಎಚ್. ರಾಜಶೇಖರ್ ತಿಳಿಸಿದ್ದಾರೆ.