

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕಾಯಂ ಹಾಗೂ ಅತಿಥಿ, ತಾತ್ಕಾಲಿಕ, ಗುತ್ತಿಗೆ ಸಿಬ್ಬಂದಿಗೆ ಬಾಕಿ ಇರುವ ಸಂಭಾವನೆಯನ್ನು ಕೂಡಲೇ ಪಾವತಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.
ವಿಶ್ವವಿದ್ಯಾನಿಲಯದ ಪರೀಕ್ಷಾ ಕಾರ್ಯಗಳಲ್ಲಿ ಭಾಗವಹಿಸುವ ಪ್ರತಿ ಅಧ್ಯಾಪಕರು, ಅಧ್ಯಾಪಕರೇತರಿಗೆ ವಿ.ವಿ. ನಿಗದಿಗೊಳಿಸಿರುವ ದರದಂತೆ ಸಂಭಾವನೆ, ಭತ್ಯೆ, ಗೌರವಧನ ಪಾವತಿಸಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರವು ಇದನ್ನು ತಡೆ ಹಿಡಿದಿರುವುದು ಶೋಚನೀಯ ಸಂಗತಿ ಎಂದು ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಹಾಗೂ ಮೌಲ್ಯಮಾಪನಾ ಕಾರ್ಯಗಳಿಗೆ ಬರುವ ಸಿಬ್ಬಂದಿಗೆ ಟಿಎ, ಡಿಎ ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಯುಜಿಸಿ ವೇತನ ಪಡೆಯುತ್ತಿರುವ ಪ್ರಾಧ್ಯಾಪಕರಿಗೆ ಉತ್ತರ ಪತ್ರಿಕೆ ಮೌಲ್ಯಮಾಪನ ದರ ಹೊರತುಪಡಿಸಿ, ಟಿಎ ಮತ್ತು ಡಿಎ ನೀಡಲಾಗುತ್ತಿದೆ. ಅತಿಥಿ, ತಾತ್ಕಾಲಿಕ, ಗುತ್ತಿಗೆ ಉಪನ್ಯಾಸಕರಿಗೆ ಉತ್ತರ ಪತ್ರಿಕೆ ಮೌಲ್ಯಮಾಪನ ದರ, ಟಿಎ ಮತ್ತು ಡಿಎ ದೀರ್ಘ ಕಾಲದಿಂದ ನೀಡುವ ಪದ್ಧತಿ ಇದೆ. ಆದ್ದರಿಂದ ಜೂ.16ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ಕಾಯಂ ಸಿಬ್ಬಂದಿ ಕೊರತೆ ಇರುವುದರಿಂದ ಪರೀಕ್ಷೆ ಮತ್ತು ಮೌಲ್ಯಮಾಪನಾ ಕಾರ್ಯಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿ.ವಿ.ಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನಗಳನ್ನು ನಿಗದಿತ ಸಮಯದಲ್ಲಿ ಮಾಡುವುದಕ್ಕೆ ಸಾಧ್ಯವೇ ಇಲ್ಲದಂತಾಗಿದೆ. ಇದನ್ನು ಮನಗಂಡು ವಿವಿಗಳಲ್ಲಿ ಸುಗಮವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವ ಸಂಬಂಧ ಕಾಲಕಾಲಕ್ಕೆ ನಿಗದಿತ ಭತ್ಯೆ ನೀಡಲಾಗುತ್ತಿದೆ.
ಈ ಸಂಬಂಧ ಪಾವತಿಸಬೇಕಾದ ಹಣಕಾಸಿನ ಲಭ್ಯತೆ ವಿದ್ಯಾರ್ಥಿಗಳ ಶುಲ್ಕಗಳಿಂದ ಭರಿಸಲಾಗುತ್ತಿದೆ. ಇದಕ್ಕೆ ಸರ್ಕಾರದ ಯಾವುದೇ ಅನುದಾನ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.