

ಮೈಸೂರು: ವಿದ್ಯಾರ್ಥಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಯತ್ನಿಸಲು ಕಾರಣರಾದ ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಸಂಶೋಧಕರ ಸಂಘದಿಂದ ಸೋಮವಾರ ಪ್ರತಿಭಟನೆ ಮಾಡಲಾಯಿತು.
ಮಾನಸಗಂಗೋತ್ರಿಯ ಟವರ್ ಕ್ಲಾಕ್‌ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಗಗನ್ ಎಂಬ ವಿದ್ಯಾರ್ಥಿಗೆ ವೆಂಕಟೇಶ್ ಅವರು ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಬೇಸತ್ತ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವೆಂಕಟೇಶ್ ಅವರು ಜಾತಿ ಆಧಾರದಲ್ಲಿ ವಿದ್ಯಾರ್ಥಿಗಳನ್ನು ನೋಡುತ್ತಾರೆ. ಅವರಿಗೆ ಬೇಕಾದದವರಿಗೆ ಹೆಚ್ಚು ಅಂಕ ನೀಡುತ್ತಾರೆ ಎಂಬ ಹಲವು ಆರೋಪಗಳಿವೆ ಎಂದು ದೂರಿದರು.
ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕುಲಪತಿ ಇಲ್ಲದೆ ವಿವಿ ಅನಾಥವಾಗಿದೆ. ಆದ್ದರಿಂದ ವಿಭಾಗದ ಮುಖ್ಯಸ್ಥರು ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ವೆಂಕಟೇಶ್ ಅವರನ್ನು ಅಮಾನತು ಮಾಡಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ನೊಂದ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸಂಶೋಧಕರ ವೇದಿಕೆಯ ಅಧ್ಯಕ್ಷ ರಾಜೇಶ್ ಚಾಕನಹಳ್ಳಿ, ಕಾರ್ಯದರ್ಶಿ ಸಿ.ಎನ್.ಪಾರ್ಥ, ಪದಾಧಿಕಾರಿಗಳಾದ ಕಲ್ಲಳ್ಳಿ ಕುಮಾರ್, ಶಿವಶಂಕರ್, ವರಹಳ್ಳಿ ಆನಂದ್, ಮಹೇಶ್ ಪಿ.ಮರಳ್ಳಿ, ಚೇತನ್ ಯಳಂದೂರ್ ಇತರರು ಇದ್ದರು.