ಮೈಸೂರು ವಿವಿ ಅಕ್ರಮ: ತನಿಖೆಗೆ ಸಮಿತಿ ರಚನೆ

Mysore University
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕಾಮಗಾರಿಯಲ್ಲಿ 55 ಕೋಟಿ ರೂ. ಹಗರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಈ ಸಂಬಂಧ ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ.

ಬೆಂಗಳೂರಿನ ಲೆಕ್ಕಪರಿಶೋಧನಾಧಿಕಾರಿ ಎ.ಆರ್.ಪರಮೇಶ್ವರಪ್ಪ ಈ ಸಮಿತಿ ಮುಖ್ಯಸ್ಥರಾಗಿದ್ದು, ಮೈಸೂರು ಪ್ರಾಂತೀಯ ಕಚೇರಿಯ ಲೆಕ್ಕಾಧೀಕ್ಷಕಿ ಎ.ಜೆ.ಪವಿತ್ರಾ ಸದಸ್ಯರಾಗಿದ್ದಾರೆ. ಈ ಕುರಿತು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸಿವಿಲ್, ಎಲೆಕ್ಟ್ರಿಕಲ್, ಕಾಮಗಾರಿಗಳು ಲೋಕೋಪಯೋಗಿ ಇಲಾಖೆಯ ಎಸ್.ಆರ್.ದರಕ್ಕಿಂತ 2ರಿಂದ 10 ಪಟ್ಟು ಹೆಚ್ಚಿನ ದರದ ಬೋಗಸ್ ಅಂದಾಜು ಪಟ್ಟಿ ತಯಾರಿಸಲಾಗಿದೆ. ಜತೆಗೆ, ಕಂಪ್ಯೂಟರ್, ಲ್ಯಾಪ್‌ಟಾಪ್, ಪೀಠೋಪಕರಣ, ಸಾಫ್ಟ್‌ವೇರ್, ಪ್ರೊಜೆಕ್ಟರ್ ಸೇರಿದಂತೆ ಹಲವು ಪರಿಕರಗಳನ್ನು ಮತ್ತು ಸಿವಿಲ್, ಎಲೆಕ್ಟ್ರಿಕಲ್ ಕಾಮಗಾರಿಗಳಿಗೆ ಬೇಕಾದ ಸರಕುಗಳ ಖರೀದಿಗಾಗಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಈ ಮೂಲಕ ವಿವಿಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಲಾಗಿದೆ.

ಅಲ್ಲದೆ, ನಿವೃತ್ತ ನೌಕರರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವಿವಿಯಲ್ಲಿ ಜರುಗುವ ಸಭೆ- ಸಮಾರಂಭಗಳ ಉಪಾಹಾರ ಖರೀದಿ ಟೆಂಡರ್‌ನಲ್ಲೂ ಸಹ ಅಕ್ರಮವಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಆರೋಪಿಸಿ, ಈ ಸಂಬಂಧ ದೂರು ನೀಡಿದ್ದಾರೆ. ಆದ್ದರಿಂದ ಈ ವಿಷಯಗಳ ಕುರಿತು ಪರಿಶೀಲನೆ ನಡೆಸಿ ವಿವರವಾದ ವರದಿಯನ್ನು ಸಲ್ಲಿಸಲು ಸರ್ಕಾರ ಸೂಚಿಸಿದೆ. ಹೀಗಾಗಿ ಈ ತಂಡವನ್ನು ರಚಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net