ಮೈಸೂರು ವಿವಿ 105ನೇ ಘಟಿಕೋತ್ಸವ: 31 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

mysore university
Published on

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ 105ನೇ ಘಟಿಕೋತ್ಸವ ಸಮಾರಂಭ ಜ.18ರಂದು ಬೆಳಗ್ಗೆ 11ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯಲಿದ್ದು, 31,689 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುತ್ತದೆ.

ಬೆಂಗಳೂರಿನ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಂಸದ ಡಾ.ಎ.ಸಿ.ಷಣ್ಮುಗಂ, ಸಾರಿಗೆ ಮತ್ತು ಸಂಚಾರ ಇಂಜಿನಿಯರ್ ಡಾ.ಬಾಬು ಕೆ.ವೀರೇಗೌಡ ಮತ್ತು ಸಮಿ ಸಬಿನ್ಸಾ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಶಾಹೀನ್ ಮಜೀದ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.

2020ರಲ್ಲಿ ನಡೆದ ಮೈವಿವಿದ 100ನೇ ಘಟಿಕೋತ್ಸವ ಸಮಾರಂಭದಲ್ಲಿ ಗೈರಾಗಿದ್ದ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ.

ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ ಚಂದ್ ಗೆಹಲೋಟ್ ಅಧ್ಯಕ್ಷತೆ ವಹಿಸುವರು. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಾಧ್ಯಾಪಕ ಡಾ.ಟಿ.ಪಿ.ಸಿಂಗ್ ಘಟಿಕೋತ್ಸವ ಭಾಷಣ ಮಾಡುವರು. ಸಮಕುಲಾಧಿಪತಿಯೂ ಆದ ಡಾ.ಎಂ.ಸಿ.ಸುಧಾಕರ್ ಪಾಲ್ಗೊಳ್ಳುವರು ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಿಳೆಯರೇ ಮುಂಚೂಣಿ: ಪದವಿ ಪಡೆದುಕೊಳ್ಳುವರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. 20,022(ಶೇ.63.18) ಮಹಿಳೆಯರು ಮತ್ತು 11,667(ಶೇ.36.81) ಪುರುಷರು ಪದವಿ ಪಡೆದುಕೊಳ್ಳಲಿದ್ದಾರೆ. ವಿವಿಧ ವಿಷಯಗಳಲ್ಲಿ 304 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ನೀಡಲಾಗುತ್ತದೆ. ಅವರಲ್ಲಿ 140(ಶೇ.40.05) ಮಹಿಳೆಯರು, 164 (ಶೇ.53.94) ಪುರುಷ ಅಭ್ಯರ್ಥಿಗಳಿದ್ದಾರೆ. 413 ಪದಕಗಳು, 208 ಬಹುಮಾನಗಳನ್ನು 216 ಅಭ್ಯರ್ಥಿಗಳಿಗೆ ಪಡೆದುಕೊಳ್ಳಲಿದ್ದಾರೆ. ಇವರಲ್ಲಿ 139 ಮಹಿಳೆಯರು.

6,300 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ಈ ಪೈಕಿ 4,074(ಶೇ.64) ಮಹಿಳೆಯರು ಎಂಬುದು ವಿಶೇಷ. 25,085 ಅಭ್ಯರ್ಥಿಗಳಿಗೆ ಸ್ನಾತಕ ಪದವಿಯನ್ನು ನೀಡಲಾಗುತ್ತದೆ. ಅವರಲ್ಲಿ 15,808(ಶೇ.63.01) ವನಿತೆಯರು ಎಂಬುದು ಗಮನಾರ್ಹ ಸಂಗತಿ.

ಎಂ.ಆರ್.ಭೂಮಿಕಾಗೆ 18 ಪದಕ:

ಸ್ನಾತಕೋತ್ತರ ಪದವಿ ವಿಭಾಗ: ಬಿ.ಎಸ್ಸಿ(ರಸಾಯನಶಾಸ್ತ್ರ) ಎಂ.ಆರ್.ಭೂಮಿಕಾ ಬರೋಬ್ಬರಿ 18 ಪದಕ, 4 ನಗದು ಬಹುಮಾನ ಪಡೆದುಕೊಳ್ಳುವ ಮೂಲಕ ಚಿನ್ನದ ಹುಡುಗಿಯಾಗಿದ್ದಾರೆ.

ಎಂ.ಎ(ಕನ್ನಡ)ದಲ್ಲಿ ಸಿ.ಕಾವ್ಯಾ 11 ಪದಕ, 5 ನಗದು ಬಹುಮಾನ, ಬಿ.ಎಸ್ಸಿ(ಸಸ್ಯಶಾಸ್ತ್ರ) ವಿವಿನಾ ಸ್ವೀಡಲ್ ಥೊರಸ್ ಅವರು 10 ಪದಕ, 2 ನಗದು ಬಹುಮಾನ, ಎಂ.ಇಡ್‌ನಲ್ಲಿ 5 ಪದಕ, 2 ನಗದು ಬಹುಮಾನ, ಬಿ.ಕಾಂ.ನಲ್ಲಿ ಎನ್.ರಕ್ಷಿತ್ 4 ಪದಕ, 1 ನಗದು ಬಹುಮಾನ, ಎಲ್‌ಎಲ್‌ಎಂನ ಆರ್.ದೇವಾನಂದ ತಲಾ 3 ಪದಕ, ನಗದು ಬಹುಮಾನ ಮುಡಿಗೇರಿಸಿಕೊಳ್ಳಲಿದ್ದಾರೆ.

ಸ್ನಾತಕ ಪದವಿ ವಿಭಾಗ:

ಬಿಎಸ್ಸಿ ವಿದ್ಯಾರ್ಥಿ ಬಿ.ವಿ.ವಿಜಯ್ 6 ಪದಕ, 5 ನಗದು ಬಹುಮಾನ ಪಡೆದುಕೊಳ್ಳಲಿದ್ದಾರೆ. ಬಿ.ಎ. ವಿದ್ಯಾರ್ಥಿ ಪಿ.ಕೆ.ಸಂಗೀತಾ ಅವರು 5 ಪದಕ, 7 ನಗದು ಬಹುಮಾನ ಗಿಟ್ಟಿಸಿಕೊಳ್ಳಲಿದ್ದಾರೆ. ಬಿ.ಎಸ್ಸಿ ಎಂ.ಎಸ್.ದೀಪಿಕಾಗೌಡ 4 ಪದಕ, 7 ನಗದು ಬಹುಮಾನ, ಬಿ.ಕಾಂ.ನ ಕೆ.ಖುಷಿ 3 ಪದಕ, 2 ನಗದು ಬಹುಮಾನ, ಬಿ.ಎ. ವಿದ್ಯಾರ್ಥಿ ಕೆ.ಎಚ್.ದರ್ಶನ್ 2 ಪದಕ, 1 ನಗದು ಬಹುಮಾನ, ಬಿ.ಎಡ್‌ನ ಎಸ್.ಕೀರ್ತನಾ ತಲಾ 2 ಪದಕ, ನಗದ ಬಹುಮಾನ, ಬಿಎ ಎಲ್‌ಎಲ್.ಬಿಯ ಪ್ರತೀಕ್ಷಾ ಪಾವಸ್ಕರ್ ತಲಾ ಒಂದು ಪದಕ, ನಗದು ಬಹುಮಾನ ಪಡೆಯಲಿದ್ದಾರೆ.

ಗೌರವ ಡಾಕ್ಟರೇಟ್ ಪಡೆದವರ ವಿವರ

ಡಾ.ಎ.ಸಿ.ಷಣ್ಮಗಂ:

ಬಿಎ ಎಲ್‌ಎಲ್‌ಬಿ ಕಾನೂನು ಪದವೀಧರರು. 1984ರಲ್ಲಿ ವೆಲ್ಲೂರು ಕ್ಷೇತ್ರದಿಂದ ಸಂಸದರಾಗಿ ತಮ್ಮ ರಾಜಕೀಯ ಜೀವನ ಶುರು ಮಾಡಿದರು. ಚೆನ್ನೈನ ಡಾ.ಎಂಜಿಆರ್ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ, ರಾಜರಾಜೇಶ್ವರಿ ಸಮೂಹ ಸಂಸ್ಥೆ, ಅರಣಿಯಲ್ಲಿರುವ ಎಸಿಎಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಹಾಗೂ ಕುಲಪತಿಯೂ ಆಗಿದ್ದಾರೆ.

ಡಾ.ಬಾಬು ಕೆ.ವೀರೇಗೌಡ

ಇವರು ಇಂಜಿನಿಯರಿಂಗ್ ಪದವೀಧರರು. ಸಾರಿಗೆ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನು ನ್ಯೂ ಜೆರ್ಸಿಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಡೆದಿದ್ದಾರೆ. ಸಾರಿಗೆ, ಮೂಲಸೌಯರ್ಕದಲ್ಲಿ ಮಾನ್ಯತೆ ಪಡೆದ ಅಧಿಕಾರಿ. ಟ್ರಾಫಿಕ್ ಇಂಜಿನಿಯರ್ ಆಗಿ ಪೂರ್ವ ಕರಾವಳಿಯಾದ್ಯಂತ ಸಾರಿಗೆ ಭೂದೃಶ್ಯವನ್ನು ರೂಪಿಸುವ ಸಂಕೀರ್ಣ ಯೋಜನೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಾಹೀನ್ ಮಜೀದ್:

ಇವರು ಅರ್ಥಶಾಸ್ತ್ರದಲ್ಲಿ ಪದವೀಧರರು. ಎಂಬಿಎ ಪದವಿಯನ್ನು ಯುಎಸ್‌ಎಯ ಕೆಲ್ಲರ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸಮಿ ಸಬಿನ್ಸಾ ಸಮೂಹದ ನ್ಯೂಟ್ರಾಸ್ಯುಟಿಕಲ್ ಕಂಪನಿಯ 3 ದಶಕದಿಂದ ನಿರ್ವಹಿಸಿಕೊಂಡು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net