ಮೈಸೂರು ವಿಮಾನನಿಲ್ದಾಣ ವಿಸ್ತರಣೆಗೆ ಸಿದ್ಧತೆ: ಅಂಡರ್ ಪಾಸ್ ಬದಲು ಬೈಪಾಸ್

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಅಂಡರ್ ಪಾಸ್ ಮೇಲೆ ರನ್‌ವೇ ನಿರ್ಮಾಣ ಕೈಬಿಟ್ಟು, ಬೈಪಾಸ್ ನಿರ್ಮಾಣ ಮಾಡುವ ಮೂಲಕ ಮೈಸೂರು ವಿಮಾನನಿಲ್ದಾಣ ವಿಸ್ತರಣೆ ಮಾಡಲಾಗುತ್ತಿದೆ.

ಈ ಏರ್‌ಪೋರ್ಟ್ ಎದುರು ಹಾದುಹೋಗಿರುವ ಮೈಸೂರು-ನಂಜನಗೂಡು ನಡುವಿನ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗಿದೆ.

ಇದರ ಅಂದಾಜು ಯೋಜನಾ ವೆಚ್ಚ 800 ಕೋಟಿ ರೂ. ಆಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರಕ್ಕೆ ಡಿಪಿಆರ್ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳಲಿದ್ದು, ಇದಕ್ಕೆ ತಗಲುವ ಯೋಜನಾ ವೆಚ್ಚವನ್ನು ಬಿಡುಗಡೆ ಮಾಡಿದ ಬಳಿಕ ಈ ಕಾಮಗಾರಿಯನ್ನು ಶುರುವಾಗಲಿದೆ.

2010ರಲ್ಲಿ ಉದ್ಘಾಟನೆಗೊಂಡ ಈ ವಿಮಾನನಿಲ್ದಾಣದ ಉನ್ನತೀಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆ. ಆದರೆ, ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಇದು ನನಸು ಮಾಡುವ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿವೆ.

ಬೈಪಾಸ್ ನಿರ್ಮಾಣಕ್ಕೆ ತೀರ್ಮಾನ:

ವಿಮಾನ ನಿಲ್ದಾಣ ವಿಸ್ತರಣೆಗೆ ಒಂದು ಕಡೆ ಹೆದ್ದಾರಿ, ಇನ್ನೊಂದು ರೈಲು ಹಳಿ ಅಡ್ಡಿಯಾಗಿದೆ. ಈ ಪೈಕಿ ಹೆದ್ದಾರಿಗೆ ಅಂಡರ್ ಪಾಸ್ ನಿರ್ಮಿಸಲು ಯೋಜಿಸಲಾಗಿತ್ತು. ಕೆಳಗೆ ಟನೆಲ್ ಕೊರೆದು, ಅದರಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು. ಮೇಲ್ಭಾಗದಲ್ಲಿ ರನ್ ವೇ ವಿಸ್ತರಣೆಗೆ ಮಾಡಿ ವಿಮಾನಗಳ ಓಡಾಟಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾವನೆಯನ್ನು 2007ರಲ್ಲಿ ಸಲ್ಲಿಸಲಾಗಿತ್ತು.

ಇದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿತ್ತು. ಆದರೆ, ವಿವಿಧ ಕಾರಣಕ್ಕಾಗಿ ಇದನ್ನು ತಿರಸ್ಕರಿಸಲಾಯಿತು. ಇದೀಗ ಅಂಡರ್ ಪಾಸ್ ಬದಲಿಗೆ ಬೈಪಾಸ್ ನಿರ್ಮಾಣಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಎಲ್ಲಿ ಹಾದು ಹೋಗಲಿದೆ ಬೈಪಾಸ್?

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಮೈಸೂರು ವಿಮಾನ ನಿಲ್ದಾಣವನ್ನು ಹಾದು ಹೋಗಲು ಇರುವ ಮಾರ್ಗವನ್ನು ಮುಚ್ಚಿ ಬೈಪಾಸ್ ರಸ್ತೆಯನ್ನು ಮಾಡಲು ರೀ ಅಲೈನ್‌ಮೆಂಟ್ ಪ್ಲಾನ್ ಮಾಡಿ ಅನುಮೋದನೆ ಪಡೆದುಕೊಂಡಿದೆ. ಮೈಸೂರು ರಸ್ತೆಯಿಂದ ಹೊರಟು ಟೋಲ್ ಗೇಟ್ ಬಳಿಕ ಮರಸೆ, ಮಾಕನಹುಂಡಿ, ಚಿಕ್ಕೇಗೌಡನಹುಂಡಿ ಮಾರ್ಗವಾಗಿ ಬೈಪಾಸ್ ನಿರ್ಮಾಣವಾಗಲಿದೆ. ಇದು 6 ಪಥದ ರಸ್ತೆಯಾಗಿರಲಿದೆ.

800 ಕೋಟಿ ರೂ.ಯೋಜನಾ ವೆಚ್ಚ:

ಬೈಪಾಸ್ ನಿರ್ಮಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ 500 ಕೋಟಿ ರೂ. ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲು ಒಪ್ಪಿದ್ದು, ಆದರೆ, ಇದರ ಯೋಜನಾ ವೆಚ್ಚ 800 ಕೋಟಿ ರೂ. ಆಗುವುದಾಗಿ ವರದಿ ನೀಡಿರುತ್ತಾರೆ. ಹೆಚ್ಚುವರಿ ವೆಚ್ಚವನ್ನು ಒಳಗೊಂಡ ಪ್ರಸ್ತಾವನೆ ಒಪ್ಪಿಗೆ ದೊರೆಯುವುದು ಬಾಕಿ ಇದೆ.

ಭೂಮಿ ಬೆಲೆ ಏರಿಕೆ ನಿರೀಕ್ಷೆ:

ಮರಸೆ ಭಾಗದಿಂದ ಚಿಕ್ಕೇಗೌಡನಹುಂಡಿತನಕ ಮತ್ತೊಂದು ಬೈಪಾಸ್ ರಸ್ತೆ ನಿರ್ಮಾಣವಾದರೆ ಅಕ್ಕಪಕ್ಕದ ಭೂಮಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಹೆದ್ದಾರಿ ಹಾದು ಹೋಗುವ ಕಡೆಗಳಲ್ಲಿ ಈಗಾಗಲೇ ಸ್ವಾಧೀನ ಕಾರ್ಯ ಮುಗಿದಿದೆ. ಮುಂದೆ ರಸ್ತೆಯ ಎಡ-ಬಲಭಾಗದಲ್ಲಿ ಹೋಟೆಲ್, ಪೆಟ್ರೋಲ್ ಬಂಕ್ ಮತ್ತಿತರ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುವ ಕಾರಣ ಒಂದಿಷ್ಟು ಬೆಲೆ ಹೆಚ್ಚಳವಾಗಲಿದೆಂದು ನಿರೀಕ್ಷಿಸಲಾಗಿದೆ.

ಹೈಟೆನ್ಷನ್ ವೈರ್, ಕಟ್ಟಡಗಳೂ ತೆರವು:

ರನ್‌ವೇ ವಿಸ್ತರಣೆಗಾಗಿ ಹೈಟೆನ್ಷನ್ ವೈರ್ ಮತ್ತು ವಿದ್ಯುತ್ ತಂತಿಗಳು, ಭೂಗತ ವಿದ್ಯುತ್ ಕೇಬಲ್ ಸಹ ಸ್ಥಳಾಂತರಿಸಬೇಕಿದೆ. ಇದಕ್ಕಾಗಿ ಅಂದಾಜು 79 ಕೋಟಿ ರೂ. ವೆಚ್ಚವಾಗಲಿದೆ. ನೀರಾವರಿ ಇಲಾಖೆ ವ್ಯಾಪ್ತಿಯ 5 ಕಾಲುವೆಗಳು ರನ್‌ವೇ ವಿಸ್ತರಣೆಗೆ ಅಡ್ಡಿಯಾಗಿವೆ. ಇದಕ್ಕೆ ತಿರುವು ನೀಡುವ ಅಥವಾ ಬಾಕ್ಸ್ ಟನಲ್ ನಿರ್ಮಾಣಕ್ಕೂ ಆಲೋಚಿಸಲಾಗಿದೆ.

ಜತೆಗೆ, ಗ್ರಾಮ ಸಂಪರ್ಕ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಮರಗಳು, ವಿವಿಧ ಕಟ್ಟಡಗಳನ್ನೂ ತೆರವು ಮಾಡಬೇಕಿದೆ.

ವಿಸ್ತರಣೆ ಬಳಿಕ ದೊಡ್ಡ ವಿಮಾನಗಳ ಹಾರಾಟ:

ಮೈಸೂರು ವಿಮಾನ ನಿಲ್ದಾಣದಲ್ಲಿ ಸದ್ಯ 1740*30 ಮೀಟರ್ ರನ್‌ವೇ ಇದ್ದು, ಎಟಿಆರ್-72 ಮಾದರಿಯ ಲಘು ವಿಮಾನಗಳು ಮಾತ್ರ ಹಾರಾಟಕ್ಕೆ ಮಾತ್ರ ಅವಕಾಶ ಇದೆ. ದೊಡ್ಡ ವಿಮಾನಗಳ ಹಾರಾಟಕ್ಕಾಗಿ ರನ್‌ವೇ ವಿಸ್ತರಣೆ ಅಗತ್ಯವಾಗಿದೆ. ಹೀಗಾಗಿ, 2750 *45 ಮೀಟರ್‌ಗೆ ರನ್‌ವೇ ಹಿಗ್ಗಿಸಲಾಗುತ್ತಿದೆ.

ಬಳಿಕವೇ 320 ಆಸನಗಳ ಏರ್‌ಬಸ್, 737 ಆಸನದ ಬೋಯಿಂಗ್ ವಿಮಾನಗಳು ಸೇರಿದಂತೆ ಇನ್ನಿತರ ಮಾದರಿಯ ವಿಮಾನಗಳು ಹಾರಾಟಕ್ಕೆ ಅನುವು ಆಗಲಿದೆ. ಭವಿಷ್ಯದ ದೃಷ್ಟಿಯಿಂದ 2047ಕ್ಕೆ 3,200 ಮೀಟರ್‌ಗೆ ರನ್‌ವೇ ವಿಸ್ತರಿಸುವುದಕ್ಕೂ ಭೂಮಿಯನ್ನು ಮೀಸಲಿಡಲಾಗುತ್ತಿದೆ.

ರನ್‌ವೇ ವಿಸ್ತರಣೆಗೊಂಡರೆ ಮೈಸೂರಿನಿಂದ ಬೆಂಗಳೂರು, ಚೆನ್ನೈ, ಕಲ್ಕತ್ತ, ಹೈದ್ರಾಬಾದ್, ಹೊಸದಿಲ್ಲಿ ಮೊದಲಾದ ಪ್ರಮುಖ ನಗರಗಳಿಗೆ ನೇರವಾಗಿ ವಿಮಾನಯಾನ ಸೇವೆ ಕಲ್ಪಿಸಬಹುದಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಕೂಡ ಬಂದು ಹೋಗಲು ವೇದಿಕೆ ಸಿದ್ಧವಾಗಲಿದ್ದು, ದೇಶ-ವಿದೇಶಗಳ ಪ್ರಮುಖ ನಗರದೊಂದಿಗೆ ವಿಮಾನಯಾನ ಸಂಪರ್ಕದಿಂದ ಪ್ರವಾಸಿಗರಿಗೆ, ಉದ್ದಿಮೆದಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಕೊನೆ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆ:

ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ 240 ಎಕರೆ ಭೂಮಿ ಅಗತ್ಯವಾಗಿದೆ. ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಭಾಗಶಃ ಪೂರ್ಣಗೊಳಿಸಲಿದೆ. ಯೋಜನೆಯಡಿ ಇನ್ನೂ 46 ಎಕರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕರೆ ಭೂಸ್ವಾಧೀನಕ್ಕೆ ಪರಿಹಾರ ಪಾವತಿ ಮಾಡಲಾಗಿದೆ. ಇನ್ನೂ 95 ಎಕರೆಗೆ ಮಾತ್ರ ಪಾವತಿ ಬಾಕಿ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಸ್ವಾಧೀನ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು 319 ಕೋಟಿ ರೂ. ಬಿಡುಗಡೆ ಮಾಡಿದೆ. ಈ ನಡುವೆ, ಈಗಾಗಲೇ ವಶ ಪಡಿಸಿಕೊಂಡಿರುವ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರವಾಗುವ ಪ್ರಕ್ರಿಯೆ ನಡೆದಿದೆ. ಇದು ಪೂರ್ಣಗೊಂಡ ಬಳಿಕ ವಿಮಾನನಿಲ್ದಾಣ ವಿಸ್ತರಣೆ ಕೆಲಸ ಶುರುವಾಗಲಿದೆ.

ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. ಈಗಾಗಲೇ 150 ಎಕರೆ ಕೆಐಡಿಬಿ ವಶಕ್ಕೆ ಪಡೆದಿದ್ದು, ಉಳಿದ 46 ಎಕರೆ ಪಡೆಯಲು ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿಮಾನಿಲ್ದಾಣ ಮೇಲ್ದರ್ಜೆಗೆ ಅಡ್ಡಿಯಾಗಿರುವ ನಂಜನಗೂಡು ಹೆದ್ದಾರಿಗೆ ಬೈಪಾಸ್ ನಿರ್ಮಿಸಿಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಕೊಂಡಿದೆ. ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ ಮೈಸೂರು ವಿಮಾನಿಲ್ದಾಣ ಎದುರು ಆಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸಲಾಗುವುದು. ಶೀಘ್ರದಲ್ಲೇ ಡಿಪಿಆರ್ ಸಿದ್ಧವಾಗಲಿದ್ದು, ಅದನ್ನು ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಈ ಕಾಮಗಾರಿಗೆ ತಗಲುವ ವೆಚ್ಚವನ್ನು ಅದು ಬಿಡುಗಡೆ ಮಾಡಿದ ಬಳಿಕ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗುವುದು. ರಾಹುಲ್‌ಕುಮಾರ್ ಗುಪ್ತಾ ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net